ಅಂಬರದಾಳವನು ಇನಶಶಿಗಳಲ್ಲದೆ

ಅಂಬರದಾಳವನು ಇನಶಶಿಗಳಲ್ಲದೆ ಅಂಬರತಳದಲಾಡುವ ಪಕ್ಷಿ ತಾ ಬಲ್ಲವೆ? ಜಲದ ಪ್ರಮಾಣವ ತಾವರೆಗಳಲ್ಲದೆ ಮೇಲಿದ್ದ ಮರಗಿಡಬಳ್ಳಿಗಳು ತಾವು ಬಲ್ಲವೆ? ಮಾವಿನ ಹಣ್ಣಿನ ರುಚಿ ಅರಗಿಳಿಗಳಲ್ಲದೆ ಚೀರ್ವ ಕಾಗೆಗಳು ತಾವು ಬಲ್ಲವೆ? ನಿನ್ನ ಮಹಿಮೆ ನಿನ್ನ ಭಕ್ತರು ಬಲ್ಲರು, ಮ ತ್ತನ್ಯರೇನು ಬಲ್ಲರಯ್ಯ ? ಭಕ್ತರಾಧೀನನೆ ಭಕ್ತರೊಡೆಯನೆ ಭಕ್ತರ ಸಲಹಯ್ಯ ನಮೋ ರಂಗವಿಠಲಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾ ನಿನಗೇನೂ ಬೇಡುವದಿಲ್ಲ

(ವಸಂತ ರಾಗ ತ್ರಿಪುಟತಾಳ) ನಾ ನಿನಗೇನೂ ಬೇಡುವದಿಲ್ಲ, ಎನ್ನ ಹೃದಯಕಮಲದೊಳು ನಿಂದಿರೊ ಹರಿಯೆ ||ಪ|| ಶಿರ ನಿನ್ನ ಚರಣದಲ್ಲೆರಗಲಿ, ಎನ್ನ ಚಕ್ಷುಗಳು ನಿನ್ನ ನೋಡಲಿ ಹರಿಯೆ ಕರ್ಣ ಗೀತಂಗಳ ಕೇಳಲಿ , ಎನ್ನ ನಾಸಿಕ ನಿರ್ಮಾಲ್ಯ ಘ್ರಾಣಿಸಲಿ ಹರಿಯೆ ||೧|| ನಾಲಿಗೆ ನಿನ್ನ ಕೊಂಡಾಡಲಿ, ಎನ್ನ ಕರಗಳೆರಡು ನಿನಗೆ ಮುಗಿಯಲಿ ಹರಿಯೆ ಪಾದ ತೀರ್ಥಯಾತ್ರೆ ಹೋಗಲಿ, ನಿನ್ನ ಧ್ಯಾನ ಎನಗೊಂದು ಕೊಡು ಕಂಡ್ಯ ಹರಿಯೆ ||೨|| ಬುದ್ಧಿ ನಿನ್ನೊಳು ಕುಣಿದಾಡಲಿ, ಎನ್ನ ಚಿತ್ತ ನಿನ್ನಲಿ ನಲಿದಾಡಲಿ ಹರಿಯೆ ಭಕ್ತಜನರ ಸಂಗವು ದೊರಕಲಿ , ರಂಗ - ವಿಠಲ ನಿನ್ನ ದಯವಾಗಲಿ ಹರಿಯೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರೇ ವೆಂಕಟಶೈಲ ವಲ್ಲಭ

(ನಾದನಾಮಕ್ರಿಯೆ ರಾಗ ಏಕತಾಳ) ಹರೇ ವೆಂಕಟಶೈಲ ವಲ್ಲಭ ಪೊರೆಯಬೇಕು ಎನ್ನ ||ಪ|| ದುರಿತದೂರ ನೀನಲ್ಲದೆ ಧರೆಯೊಳು ಪೊರೆವರ ನಾ ಕಾಣೆ ನಿನ್ನಾಣೆ ||ಅ.ಪ|| ಆರು ನಿನ್ನ ಹೊರತೆನ್ನ ಪೊರೆವರು ನೀರಜಾಕ್ಷ ಹರಿಯೆ ಅ- ಪಾರಮಹಿಮ ಪುರಾಣಪುರುಷ ಘೋರ ದುರಿತಗಳ ದೂರ ಮಾಡಿಸೋ ||೧|| ಇಂದಿರೇಶ ಅರವಿಂದನಯನ ಎನ್ನ ತಂದೆ ತಾಯಿ ನೀನೆ ಹೊಂದಿದವರ ಅಘವೃಂದ ಕಳೆವ ಮಂದರಾದ್ರಿಧರನೇ ಶ್ರೀಧರನೆ ||೨|| ಮಂಗಳಾಂಗ ಮಹನೀಯ ಗುಣಾರ್ಣವ ಗಂಗೋದಿತ ಪಾದ ಅಂಗಜಪಿತ ಅಹಿರಾಜಶಯ್ಯ ಶ್ರೀ ರಂಗವಿಠಲ ದೊರೆಯೇ ಶ್ರೀ ಹರಿಯೇ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ

(ಭೈರವಿ ರಾಗ ಆದಿತಾಳ)

 

ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ

ಸುರಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ||ಪ||

 

ವೈಕುಂಠದಿಂದ ಬಂದು ಶೇಷಾಚಲದಲಿ ನಿಂದು

ಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧು

ಭಕುತಿ ಮುಕುತಿಯೀವ ಮತ್ಕುಲದೇವನೆ

ಸಕಲ ಜನಸೇವಿತ ಘನ ಪರಿಪೂರ್ಣನೆ

ವಿಕಸಿತ ಕಮಲನಯನ ಕಂಜನಾಭನೆ

ಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ ||೧||

 

ಜ್ಞಾನಿಗಳ ಗೋಚರನೆ ತನ್ನ ಧ್ಯಾನಿಪರ ಮನೋಹರನೆ

ದಾನವರ ಸಂಹರನೆ ಮಹಾದೈನ್ಯಾದಿಗಳುದ್ಧರನೆ

ಆನಂದಮಯನೆ ಅನೇಕಾವತಾರನೆ

ಅನುದಿನ ನೆನೆವರ ಹೃದಯಮಂದಿರನೆ

ಘನಮಾಣಿಕ ಭೂಷಣ ಶೃಂಗಾರನೆ

ತನುವಿನ ಕ್ಲೇಶ ದುರಿತಸಂಹರನೆ ||೨||

ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಮ್ಮನೆ ವೈಷ್ಣವನೆಂಬಿರಿ

(ನಾರಾಯಣಿ ರಾಗ ಆದಿತಾಳ) ಸುಮ್ಮನೆ ವೈಷ್ಣವನೆಂಬಿರಿ ಪರ- ಬೊಮ್ಮ ಸುಜ್ಞಾನವನರಿಯದ ಮನುಜನ ||ಪ|| ಮುಖವ ತೊಳೆದು ನಾಮವನಿಟ್ಟೆನಲ್ಲದೆ ಸುಖತೀರ್ಥ ಶಾಸ್ತ್ರವನೋದಿದೆನೆ ಸುಖಕೆ ಶೃಂಗಾರಕೆ ಮಾಲೆ ಹಾಕಿದೆನಲ್ಲದೆ ಭಕುತಿ ರಸದಲ್ಲಿ ಮುಳುಗಿದೆನೇನಯ್ಯ ||೧|| ಊರು ಮಾತುಗಳಾಡಿ ದಣಿದೆನಲ್ಲದೆ ನಾರಾಯಣ ಕೃಷ್ಣ ಶರಣೆಂದೆನೆ ನಾರಿಯ ನುಡಿ ಕೇಳಿ ಮರುಳಾದೆನಲ್ಲದೆ ಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ ||೨|| ನರೋತ್ತಮರಿಗಧಿಕ ಗಂಧರ್ವರಿಗಧಿಕ ಸುರೇಂದ್ರಗಧಿಕ ಹರಗಧಿಕ ವಿರಿಂಚಿಗಧಿಕ ಸಿರಿಗಧಿಕ ಹರಿಸರ್ವೋತ್ತಮನೆಂದು ತಿಳಿದೆನೇನಯ್ಯ ||೩|| ಜಗತು ಸತ್ಯವೆಂದು ಪಂಚಭೇದವ ತಿಳಿದು ಮಿಗೆ ರಾಗದ್ವೇಷಂಗಲನು ವರ್ಜಿಸಿ ಭಗವಂತನ ಲೀಲೆ ಶ್ರವಣ ಕಥೆಗಳಿಂದ ನಿಗಮಗೋಚರನೆಂದು ತಿಳಿದೆನೇನಯ್ಯ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು

(ಮಾಳವಶ್ರೀ ರಾಗ , ಏಕತಾಳ) ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು ವ್ಯಾಸಮುನಿರಾಯರ ಸಂನ್ಯಾಸದಿರವ ||ಪ|| ಆಸೆಯಿಂದ ತಮ್ಮುದರ ಪೋಷಣಕಾಗಿ ಛಪ್ಪನ್ನ ದೇಶವ ತಿರುಗಿ ಸಂಚಾರ ಮಾಡುತ ಮೀಸಲ ಮಡಿ ಬಚ್ಚಿಟ್ಟು ಮಿಂಚುಕೂಳನುಂಡು ದಿನ ಮೋಸಮಾಡಿ ಕಳೆವ ಸಂನ್ಯಾಸಿಗಳ ಸರಿಯೆ ||೧|| ಕೆರೆಬಾವಿ ಪುರ ಅಗ್ರಹಾರಂಗಳ ಮಾಡಿ ಭೂ- ಸುರರೊಂದು ಲಕ್ಷ ಕುಟುಂಬಗಳ ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸರಾ- ಯರ ಗುಣಗಣ ಗಾಂಭೀರ್ಯಾದಿಗಳ ||೨|| ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮ- ಯುಗಳವನರ್ಚಿಸಿ ಭಕುತಿಯಿಂದ ರಘುಪತಿಭಜಕ ಬ್ರಹ್ಮಣ್ಯತೀರ್ಥರ ಕುವರ ರಂಗವಿಠಲನನ್ನು ಬಿಡೆಬಿಡೆನು ಎಂಬ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ

(ಮೋಹನ ರಾಗ , ಛಾಪುತಾಳ) ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ ||ಪ|| ಉರಸಿನ ಮ್ಯಾಲೆ ಸರಸಿಜಾಕ್ಷಿಯನಿರಿಸಿ ಬಂದ ||ಅ.ಪ|| ಧೀರ ಶರಧಿಗಂಭೀರ ವರಘನಸಾರ ಕಸ್ತೂರಿತಿಲಕಧರ ಹೀರ ಮೌಕ್ತಿಕ ಕೇಯೂರ ಧರಿಸಿದ ನವನೀತ ಚೋರ ಬಂದ ||೧|| ನಂದ ಗೋಪಿಗಾನಂದವೂಡಿದ ಕಂದ ಗೋಕುಲದಿ ಬಂದ ಅಂದದಿಂದ ಸೌಂದರಿಯರ ಗೋವಿಂದ ಮುಕುಂದ ||೨|| ಅಂಗನೆಯರ ಕುಚಗಳಾಲಿಂಗನವ ಮಾಡಿ ನವಮೋಹನಾಂಗ ರಂಗವಿಠಲನು ನಮ್ಮಂತರಂಗದೊಳಗಿಹ ಕಲ್ಮಷಭಂಗ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸದ್ದು ಮಾಡಲು ಬ್ಯಾಡವೋ

(ಕಲ್ಯಾಣಿ ರಾಗ ಅಟ್ಟತಾಳ) ಸದ್ದು ಮಾಡಲು ಬ್ಯಾಡವೋ , ನಿನ್ನ ಕಾಲಿಗೆ ಬಿದ್ದು ನಾ ಬೇಡಿಕೊಂಬೆ ||ಪ|| ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ- ದಿದ್ದದ್ದು ಕಂಡರೇನೆಂಬುವರೊ ರಂಗ ||ಅ.ಪ|| ಬಳೆ ಘಲ್ಲುಕೆನ್ನದೇನೊ , ಕೈಯ ಪಿಡಿದು ಎಳೆಯದಿರೊ ಸುಮ್ಮನೆ ಮೊಲೆಗಳ ಮೇಲಿನ ಸೆರಗನೆಳೆಯಲು ಕೊ- ರಳ ಪದಕಂಗಳು ಧ್ವನಿಗೆಯ್ಯುವುವೊ ರಂಗ ||೧|| ನಿರುಗೆಯ ಪಿಡಿಯದಿರೊ , ಕಾಂಚಿಯ ದಾಮ ಕಿರುಗಂಟೆ ಧ್ವನಿಗೆಯ್ಯದೆ ಕಿರುದುಟಿಗಳ ನೀನು ಸವಿದು ಚಪ್ಪರಿಸಲು ತರವಲ್ಲ ಗಂಡ ಮತ್ಸರವ ತಾಳುವನಲ್ಲ ||೨|| ನಾಡಮಾತುಗಳೇತಕೊ-ಸಂಗೀತವ ಪಾಡುವ ಸಮಯವೇನೊ ಗಾಡಿಕಾರ ಶ್ರೀರಂಗವಿಠಲನೆ ಪಾಡುಪಂಥಗಳೊಡಗೂಡುವ ಸಮಯದಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ

(ರಾಗ ಧನ್ಯಾಸಿ , ರೂಪಕ ತಾಳ) ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||ಪ|| ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮ ||ಅ.ಪ|| ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾಡಿ ಅರಳುಮಲ್ಲಿಗೆ ಮಾಲೆ ಹರಿಯ ಚರಣಕರ್ಪಿಸದವನ ಜನ್ಮ ||೧|| ಒಂದು ಶಂಖ ಉದಕ ತಂದು ಚಂದದಿಂದ ಹರಿಗೆ ಎರೆದು ಗಂಧ ಪುಷ್ಪದಿಂದ ಹರಿಯ ವಂದನೆ ಮಾಡದವನ ಜನ್ಮ ||೨|| ಮುಗುಳು ತೆನೆಯಲೆಸೆವ ತುಳಸಿದಳವ ತಂದು ಪ್ರೇಮದಿಂದ ಜಗನ್ಮಯಗೆ ಅರ್ಪಿಸಿ ಕರವ ಮುಗಿದು ಸ್ತುತಿಸದವನ ಜನ್ಮ ||೩|| ಭೋಗಿಶಯನನ ದಿನದಿ ಸಕಲ ಭೋಗಗಳನು ತಾನು ತೊರೆದು ಭಾಗವತರ ಮ್ಯಾಳದಿಂದ ಜಾಗರಣೆ ಮಾಡದವನ ಜನ್ಮ ||೪|| ಜಂಗಮರೊಳಗಧಿಕವನಿಪ ಭಂಗುರ ಮನುಷ್ಯದೇಹ ಪಡೆದು ರಂಗವಿಠಲನೆನಿಪ ಪಶ್ಚಿಮರಂಗಗರ್ಪಿಸದವನ ಜನ್ಮ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ

(ತೋಡಿ ರಾಗ ಛಾಪುತಾಳ) ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ||ಪ|| ಯದುಪತಿಯನಗಲಿಸಿದ ಒಮ್ಮಿಂದಲೊಮ್ಮೆ ||ಅ.ಪ|| ಎವೆಯ ಮರೆಯ ಮಾಡಿ ಪೋದ ಯಾಕೋ ವಿಧಿಯೇ ಸುಳಿಗುರುಳು ಕಡೆಗಣ್ಣ ನೋಟದಿಂದಲಿ ಕವಕವಿಸಿ ನಗುವ ಮುದ್ದು ಮುಖವನು ತವಕದಿಂದಲಿ ಮರಳಿ ಮರಳಿ ನೋಡಿದ್ಹೋದೆವೆ ||೧|| ಹಕ್ಕಿಯ ಮ್ಯಾಲುಳ್ಳ ದಯ ನಮ್ಮ ಮ್ಯಾಲೆ ಇಕ್ಕದೇಕೆ ಹೋದ್ಯೋ ವಿಧಿಯೇ ರೆಕ್ಕೆ ಎರಡುಳ್ಳರೆ ಮಧುರೆಗೆ ಪೋಗಿ ಘಕ್ಕನೆ ಶ್ರೀ ಹರಿಯೊಡನೆ ಕೂಡುತಿದ್ದೆವಲ್ಲ ||೨|| ತಂಗೀ ನಮ್ಮೆದೆಯು ಕಲ್ಲಾಗಿ ಇದ್ದೇವೆ ಹಿಂಗುವರೆ ಸಖಿಯರು ಒಮ್ಮಿಂದಲೊಮ್ಮೆ ರಂಗವಿಠಲನ್ನ ಅಂಗಸಂಗವ ಬಿಟ್ಟು ಇಂಥ ಭಂಗಜೀವ ಸುಡಸುಡಲ್ಯಾತಕೋ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು