ಪಿಳ್ಳಾರಿ ಗೀತೆಗಳು

ಪಿಳ್ಳಾರಿ ಗೀತೆಗಳು

ಪಿಳ್ಳಾರಿ ಗೀತೆಗಳು ಕರ್ನಾಟಕ ಸಂಗೀತ ಸಂಶೋಧಕರಾದ ಶ್ರೀಯುತ ಡಾ|| ರಾ. ಸತ್ಯನಾರಾಯಣ ಅವರು ಸಂಗೀತಕ್ಕೆ ಸಂಬಂಧಪಟ್ಟ ಹಾಗೆ ಅನೇಕ ಗ್ರಂಥಗಳನ್ನು ಸಂಶೋಧನಾತ್ಮಕವಾಗಿ ರಚಿಸಿದ್ದಾರೆ. ಅವರು ಸಂಗೀತಕ್ಕೆ ಸಂಬಂಧಪಟ್ಟ ವಿವಿಧ ವಿಚಾರಗಳ ಬಗ್ಗೆ ವಿಶದವಾಗಿ ಬೆಳಕು ಚೆಲ್ಲಿದ್ದಾರೆ. ಅವರ “ಕರ್ಣಾಟಕ ಸಂಗೀತ ವಾಹಿನಿ” ಎಂಬ ಮಹಾನ್ ಗ್ರಂಥದಲ್ಲಿ ಪಿಳ್ಳಾರಿ ಗೀತೆಗಳ ಬಗ್ಗೆ ಕೆಲವು ವಿಚಾರಗಳನ್ನು ಸಂಶೋಧನಾತ್ಮಕವಗಿ ಬರೆದು ತಿಳಿಸಿದ್ದಾರೆ. ಪಿಳ್ಳಾರಿ ಗೀತೆಗಳ ಬಗ್ಗೆ ಅವರ ವಿಚಾರಧಾರೆಯ ಕಡೆ ಒಂದು ಪಕ್ಷಿನೋಟ ಹರಿಸೋಣ. ಹೆಚ್ಚುಕಡಿಮೆ ಎಲ್ಲಾ ದ್ರಾವಿಡ ಭಾಷೆಗಳಲ್ಲಿಯೂ ಪಿಳ್ಳೆ (ಎಂದರೆ ಪುಟ್ಟದು, ಹ್ರಸ್ವವಾದುದು) ಎಂಬ ಮೂಲ ಶಬ್ದವು ಸಾಧಾರಣವಾಗಿ ಉಪಯೋಗದಲ್ಲಿದೆ. ಕನ್ನಡದಲ್ಲಿ ನರಪಿಳ್ಳೆ, ಚಿಳ್ಳೆಪಿಳ್ಳೆ, ಪಿಳ್ಳಂಗೋವಿ ಮುಂತಾದ ಶಬ್ದಗಳು ಚಿರಪರಿಚಿತ. ಪಿಳ್ಳೆಯು ಮುದ್ದಿನಿಂದ ಪಿಳ್ಳಾರಿ ಆಗಿದೆ. ದೇವತೆಗಳಲ್ಲಿ ಅತ್ಯಂತ ಪುಟ್ಟವನಾದ ಗಣಪತಿಗೆ ಪಿಳ್ಳಾರಿ ಎಂಬ ಹೆಸರಿನ ಕಲ್ಪನೆಯು ಬಹುಶಹ ಈ ಅರ್ಥದ ಸುತ್ತಲೂ ಬೆಳೆಯಿತೇನೋ! ಇದೇ ಕಲ್ಪನೆಯು ತಮಿಳಿನಲ್ಲಿ ಪೂಜ್ಯ ಭಾವ ಸೂಚನೆಯೊಡನೆ ಪಿಳ್ಳೈಯಾರ್ ಆಯಿತು. ಪಿಳ್ಳಾರಿ ಗೀತೆ ಎಂಬ ಹೆಸರು ಎರಡು ರೀತಿಗಳಲ್ಲಿ ಅನ್ವರ್ಥವಾಗಿವೆ. ಅದು ಗಣಪತಿ ವಿಷಯವೂ ಹೌದು. ಗೇಯ ಪ್ರಬಂಧಗಳಲ್ಲಿ ಅತ್ಯಂತ ಪುಟ್ಟದೂ ಹೌದು. ಪುರಂದರದಾಸರು ಮಲಹರಿ ರಾಗದಲ್ಲಿ ರಚಿಸಿರುವ ಲಂಬೋದರ, ಕುಂದಗೌರ, ಕೆರೆಯ ನೀರನು ಮತ್ತು ಪದುಮನಾಭ – ಈ ನಾಲ್ಕನ್ನೂ ಪಿಳ್ಳಾರಿ ಗೀತೆಗಳೆಂದು ಸಾಮಾನ್ಯವಾಗಿ ಹೆಸರಿಸಲಾಗಿದೆ. ಇವುಗಳಲ್ಲಿ ಲಂಬೋದರ ಗೀತೆಯೊಂದನ್ನೇ ಪಿಳ್ಳಾರಿ ಗೀತೆಯೆಂದು ತಿಳಿದು ಉಳಿದವುಗಳನ್ನು ಅದರ ಅನುಬಂಧಗಳೆಂದು ವ್ಯವಹರಿಸಿರುವುದು ಹೆಚ್ಚುಕಡಿಮೆ ಎಲ್ಲಾ ಗ್ರಂಥದ ಆಕರಗಳಲ್ಲೂ ಕಂಡುಬರುತ್ತದೆ. ಇವುಗಳನ್ನೆಲ್ಲಾ ಒಟ್ಟು ಸೇರಿಸಿ ಒಂದೇ ಪ್ರಬಂಧವೆಂದು ಸಂಪ್ರದಾಯವು ಭಾವಿಸುತ್ತದೆ. ಪ್ರಬಂಧ ಎಂದರೆ ಸಾಮಾನ್ಯಾರ್ಥದಲ್ಲಿ ಹಾಡು ಎಂದೇ ಆಗುತ್ತದೆ. ಆದರೆ ಸ್ವರ, ಬಿರುದ, ಪದ, ಪಾಟ, ತೇನಕ, ತಾಳ ಎಂಬ ಅಂಗಗಳನ್ನು ವಿಶೇಷಾರ್ಥದಲ್ಲಿ ಒಳಗೊಂಡ ಹಾಡುಗಳು. ಸುಳಾದಿ ಗೀತಗಳು ಪ್ರಬಂಧಗಳ ಸಾಲಗಸೂಡ ಎಂಬ ಒಳಭೇದಕ್ಕೆ ಸೇರುತ್ತವೆ. ಈ ರೀತಿಯ ಪ್ರಬಂಧಗಳ ಸಮುಚ್ಚಯವನ್ನು – ರಾಗಮಾಲಿಕೆ ಎಂಬಂತೆ – ಪ್ರಬಂಧಮಾಲಿಕೆ ಎಂದು ಬೇಕಾದರೆ ಕರೆಯಬಹುದು.ಹೀಗೆ ಎರಡು ಅಥವಾ ಹೆಚ್ಚು ಸಣ್ಣ ಗೀತೆಗಳನ್ನು ನಿರ್ದಿಷ್ಟ ಕ್ರಮದಲ್ಲಿ ಒಟ್ಟುಗೂಡಿಸಿ ಸಮಷ್ಟಿಯಲ್ಲಿ ವ್ಯವಹರಿಸುವುದು, ಒಂದೇ ಪ್ರಬಂಧ ರೀತಿಯೆಂದು ಹೆಸರಿಟ್ಟು ಹಾಡಿ ನುಡಿಸುವುದು ಸಾವಿರ ವರ್ಷಗಳಿಗಿಂತ ಹಿಂದಿನಿಂದಲೂ ನಮ್ಮ ಸಂಗೀತ ಪದ್ಧತಿಯಲ್ಲಿ ಇದೆ. ಇಂತಹವನ್ನು ಆಲಿಕ್ರಮವೆಂದು ಕರೆಯಲಾಗಿದೆ. ಈ ನಾಲ್ಕು ಪಿಳ್ಳಾರಿ ಗೀತೆಗಳಲ್ಲಿ ಪದುಮನಾಭ ಎಂಬ ಗೀತೆಯು ಪುರಂದರದಾಸರದ್ದಲ್ಲವೇನೋ ಎಂಬ ಸಂಶಯ ಇದೆ. ಅದರಲ್ಲಿ ‘ಅಭಿನವ ಪುರಂದರ’ ಎಂಬ ಅಂಕಿತವಿದೆ. ಈ ಅಂಕಿತವುಳ್ಳ ಹರಿದಾಸರೊಬ್ಬರು ಅನೇಕ ಗೀತೆ, ದೇವರನಾಮ ಮುಂತಾದವುಗಳನ್ನು ರಚಿಸಿದ್ದು ಈಗ ದೊರಕಿ, ಹೀಗೊಬ್ಬರು ಹರಿದಾಸರು ಇದ್ದರೆಂಬುದು ಬೆಳಕಿಗೆ ಬರುತ್ತಲಿದೆ. ಇವರು ಪುರಂದರದಾಸರ ಮಗನೇ ಆಗಿದ್ದರೆಂದು ಹರಿದಾಸ ಪರಂಪರೆಯ ಸಾಂಪ್ರದಾಯಿಕರು ಹೇಳುತ್ತಾರೆ. ಇದು ಹೇಗಾದರೂ ಇರಲಿ. ಪಿಳ್ಳಾರಿ ಗೀತೆಗಳು ಹರಿದಾಸ ಕೃತಿಗಳು ಎಂಬುದರಲ್ಲಿ ಯಾವ ಸಂಶಯವೂ ಇಲ್ಲವಷ್ಟೇ. ಈ ಪಿಳ್ಳಾರಿಗೀತೆಗಳಿಗೆ ಸಂಬಂಧಿಸಿದ ಹಾಗೆ ಇನ್ನೂ ಕೆಲವು ವಿಚಾರಗಳನ್ನು ಇಲ್ಲಿ ಗಮನಿಸಬಹುದು. ಮೊದಲನೆಯದಾಗಿ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ಗೀತೆಯು ಮೂಲತಃ ಪಿಳ್ಳಾರಿ ಗೀತೆಯಾಗಿರಲಿಲ್ಲ ಎನ್ನಿಸುತ್ತದೆ. ಏಕೆಂದರೆ ಇದು ಪುರಂದರದಾಸರು ಮಲಹರಿ ರಾಗದಲ್ಲಿ ರಚಿಸಿರುವ ಒಂದು ಸುಳಾದಿಯ ನುಡಿಯಾಗಿರುವುದು ಮೈಸೂರು ವಿಶ್ವ ವಿದ್ಯಾ ನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಒಂದು ಹಸ್ತ ಪ್ರತಿಯಿಂದ ತಿಳಿದು ಬಂದಿದೆ. ಇದರಿಂದ ಈ ಗೀತೆಯು ಸುಳಾದಿಯ ಅವಿಭಾಜ್ಯ ಅಂಗವಾಗಿದೆಯೆಂದೂ ಕಂಡುಬರುತ್ತದೆ. ಇದನ್ನೂ, ಇದರೊಂದಿಗೆ ಮೇಲ್ಕಂಡ ಮೂರು ಗೀತೆಗಳನ್ನೂ ಕಲೆಹಾಕಿ ಒಂದೇ ಪ್ರಬಂಧವೆಂದು ಪರಿಗಣಿಸಿರುವ ಪರಂಪರೆಯನ್ನು ಗಮನಿಸಿದರೆ ಪಿಳ್ಳಾರಿ ಗೀತೆಗಳಿಗೂ ಸುಳಾದಿಗೂ ಇರುವ ನಿಕಟ ಸಂಬಂಧವೂ ಸ್ಪಷ್ಟವಾಗುತ್ತದೆ. ಸುಳಾದಿಗಳಿಗೆ ಗೀತೆಗಳೆಂಬ ಪರ್ಯಾಯ ನಾಮವಿದ್ದುದನ್ನು ವೆಂಕಟಮುಖಿಯವರು ಸ್ಪಷ್ಟೋಕ್ತಿಯಲ್ಲಿ ಹೀಗೆ ಹೇಳುತ್ತಾರೆ. “(ಇತಿ ಚೇದುಚ್ಯತೇ) ಗೀತ ಶಬ್ದೋsಯಂ ಯೋಗತಃ ಪುನಃ| ಪ್ರಬಂಧಾಲಾಪಠಾಯಾನಾಂ ವಾಚಕಃ ಸ್ಯಾತ್ ತಥಾsಪ್ಯಸೌ| ರೂಢ್ಯಾ ಸಾಲಗಸೂಡಾಖ್ಯಗೀತಭೇದೈಕವಾಚಕಃ| (ಚತುರ್ದಂಡೀ ಪ್ರಕಾಶಿಕಾ) ಆದರೆ 18ನೇ ಶತಮಾನದ ವೇಳೆಗೆ ಇದರ ಖಂಡಗಳು ಸ್ವತಂತ್ರ ಸ್ಥಾನಮಾನ ಪಡೆದು ಗೀತೆಗಳೆಂಬ ಹೆಸರಿನಿಂದ ನಿಂತಿರುವ ಸಾಧ್ಯತೆಗಳು ಕಂಡುಬಂದಿವೆ. ಎರಡನೆಯದು ಕುಂದಗೌರ ಎಂಬ ಗೀತೆಯ ಪ್ರಾಚೀನತೆಯನ್ನು ಕುರಿತದ್ದು. ತುಳಜರು ಎಂಬ ಸಂಗೀತ ಶಾಸ್ತ್ರಜ್ಞರು ( ಮರಾಠರಾದ ಶರಭೋಜಿ ಎಂಬುವರು ಕ್ರಿ.ಶ. 1711ರಿಂದ 1725ರ ವರೆಗೂ ತಂಜಾವೂರನ್ನು ಆಳಿದರು. ಈ ಕಾಲದಲ್ಲಿ ತುಕ್ಕೋಜಿ ಎಂಬ ನಾಮಾಂತರವುಳ್ಳ ತುಳಜರು ಮಹಾದೇವ ಪಟ್ಟಣದಲ್ಲಿ ರಾಜಪ್ರತಿನಿಧಿಯಾಗಿ ಆಳುತ್ತಿದ್ದರು. ಶರಭೋಜಿಯ ನಂತರ ತುಳಜರು ತಂಜಾವೂರನ್ನು ಆಳಿದರು. ಇವರು ಸಂಗೀತ ವಿದ್ವಾಂಸರೂ, ವಾಗ್ಗೇಯಕಾರರೂ ಆಗಿದ್ದರು. ಇವರು ರಚಿಸಿದ ಸಂಗೀತ ಗ್ರಂಥವೇ ಸಂಗೀತ ಸಾರಾಮೃತ) ತಮ್ಮ ಸಂಗೀತ ಸಾರಾಮೃತದ ರಾಗವಿವೇಕ ಪ್ರಕರಣದಲ್ಲಿ ಅವರು ಮಲಹರಿ ರಾಗದ ಲಕ್ಷಣವನ್ನು ನಿರೂಪಿಸುವಾಗ “ ವಿರೂಪಾಕ್ಷ ಕರುಣಾಕರ” ಅಥವಾ “ಮಂದಿರಾಯ ಮಾನಮಕುಟ” ಎಂಬ ಇದರ ಅಂಶವನ್ನು “ಧರಿರಿಸಧಪ ಧಪ ಮಗರಿಸ” ಎಂಬ ಧಾತುವಿನೊಡನೆ ಲಕ್ಷ್ಯದ ಉದಾಹರಣೆಯಾಗಿ ಕೊಟ್ಟಿದ್ದಾರೆ. ಲಕ್ಷ್ಯದಿಂದ ಉದಾಹರಣೆಗಳನ್ನು ಎತ್ತಿ ಕೊಡುವಾಗ ಸುಳಾದಿಗಳಿಂದಲೂ, ಗೀತಗಳಿಂದಲೂ ಪ್ರತ್ಯೇಕವಾಗಿ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಕೊನೆಯಲ್ಲಿ, “ಇತಿ ಗೀತ ಪ್ರಯೋಗಃ” ಎಂದು ಹೇಳುವುದರಿಂದ ಇದು 18ನೇ ಶತಮಾನಕ್ಕಿಂತಲೂ ಮುಂಚಿನಿಂದಲೂ ಸುಳಾದಿಯಿಂದ ಬೇರ್ಪಟ್ಟು ಸ್ವತಂತ್ರವಾಗಿ ನಿಂತಿರಬಹುದು ಎಂದೆನ್ನಿಸುತ್ತದೆ. ಈ ನಾಲ್ಕು ಗೀತೆಗಳಲ್ಲೂ ಬೇರೆ ಬೇರೆ ದೇವರ ಸ್ತುತಿಯೂ ವಿಷಯ ವೈವಿಧ್ಯವೂ ಇದೆ. ಹಾಗಾಗಿ ಇವನ್ನು ಒಂದೇ ಗೇಯ ಪ್ರಬಂಧವಾಗಿ ಪುರಂದರ ದಾಸರು ರಚಿಸಿರಬಹುದು ಎಂಬುದೂ ಚಿಂತಿಸಬೇಕಾದ ವಿಷಯವಾಗಿದೆ. ಅಂದರೆ ಈ ನಾಲ್ಕು ಗೀತೆಗಳು ಹದಿನೇಳನೆಯ ಶತಮಾನದ ಮಧ್ಯದಲ್ಲೇ ಒಡೆದು ಬೇರೆ ಬೇರೆಯಾಗಿರಬಹುದೆಂಬ ಅನುಮಾನವು ಇದೆ. ಇವು ಹೇಗಾದರೂ ಇರಲಿ. ಇಂದು ಸಂಗೀತ ಕಲಿಯಲು ಬಯಸುವವರಿಗೆಲ್ಲ ಬಾಲಪಾಠವಾಗಿ ಈ ಗೀತೆಗಳು ಸಹಾಯಕವಾಗಿವೆ. ಸಂಗೀತದಲ್ಲಿ ಈ ಗೀತೆಗಳು ರಾಗ ಲಕ್ಷಣವನ್ನೂ ತಿಳಿಸಿ ಅಲ್ಲಿಂದಲೇ ಗಮಕ ಪ್ರಯೋಗ ಪ್ರಾರಂಭಿಸಲೂ ಸಹಾ ಸಹಕರಿಯಾಗಿವೆ ಎಂಬುದರಲ್ಲಂತೂ ಅನುಮಾನವಿಲ್ಲ ಅಲ್ಲವೇ? ಪಿಳ್ಳಾರಿ ಗೀತೆಗಳ ( ಅಥವಾ ಯಾವುದೇ ಗೀತೆಗಳ) ರಚನೆಯಲ್ಲಿ ಒಂದು ಸ್ವಾರಸ್ಯ ಗಮನಿಸಬಹುದು. ಇಲ್ಲಿ ಗೀತೆಯ ಪ್ರತಿ ಅಕ್ಷರಕ್ಕೂ ಒಂದೊಂದು ಸ್ವರ ಬಂದಿದೆ. ಈ ಸ್ವರವೂ ಆಯಾ ಅಕ್ಷರದಷ್ಟೇ ಕಾಲಪ್ರಮಾಣವುಳ್ಳದ್ದು. ಒಂದೆರಡು ಅಪವಾದಗಳನ್ನು ಬಿಟ್ಟರೆ ಇದೇ ಸಾಮಾನ್ಯ ನಿಯಮ. ಹೀಗಾಗಿ ಸಂಗೀತ ಕಲಿಯಲು ಪ್ರಾರಂಭಿಸುವವರಿಗೆ ಇದು ಕಲಿಯಲು ಸುಲಭವೆನ್ನಿಸುತ್ತದೆ. ಈ ನಾಲ್ಕೂ ಗೀತೆಗಳು ಚತುರಶ್ರ ರೂಪಕ ಹಾಗೂ ತಿಶ್ರ ತ್ರಿಪುಟವೆಂಬ ಎರಡೇ ತಾಳಗಳಲ್ಲಿ ನಿಬದ್ಧವಾಗಿವೆ. ಮಲಹರಿ ರಾಗದ ಗೀತೆಗಳಲ್ಲಿ ಮಂದ್ರ ದೈವತದಿಂದ ತಾರ ರಿಷಭದ ವರೆಗೆ ಸಂಚಾರವಿದೆ. ಇದರಿಂದ ಪ್ರಾರಂಭದಲ್ಲೇ ಮೂರು ಸ್ಥಾಯಿಗಳ ಪರಿಚಯವಾಗುತ್ತದೆ. ಹೀಗೆ ಪಿಳ್ಳಾರಿ ಗೀತೆಗಳು ಸಂಗೀತ ಪ್ರಪಂಚದ ಅತಿ ಮುಖ್ಯ ಅಂಗಗಳಾಗಿವೆ. ಇದರ ನಂತರ ಬೇರೆ ಬೇರೆ ರಾಗಗಳ ಗೀತೆಗಳು ಕಲಿಯುವ ಅವಕಾಶ ಇದೆ. ಆಧಾರ ಗ್ರಂಥ:- ಡಾ|| ರಾ. ಸತ್ಯನಾರಾಯಣ ಅವರ "ಕರ್ಣಾಟಕ ಸಂಗೀತವಾಹಿನಿ"