ಪುರಂದರ ದಾಸರು ಮತ್ತು ಬತ್ತೀಸ ರಾಗಗಳು

ಪುರಂದರ ದಾಸರು ಮತ್ತು ಬತ್ತೀಸ ರಾಗಗಳು

ಪುರಂದರ ದಾಸರ ರಚನೆಗಳಲ್ಲಿ ಅವರ ಕಾಲದ ಸಂಗೀತದ ಬಗ್ಗೆ ಹಲವು ಹೊಳಹುಗಳು ನಮಗೆ ದೊರೆಯುತ್ತವೆ. ಅವರ ಕಾಲದ ರಾಗ ತಾಳಗಳು, ವಾದ್ಯಗಳು ಹಾಡುವ ಬಗೆ ಈ ಮೊದಲಾದುವುಗಳನ್ನು ಅವರ ರಚನೆಗಳೊಳಗಿರುವ ಅಂತರಿಕ ಆಧಾರಗಳಿಂದ ನಾವು ಪಡೆಯಬಹುದು. ಮೊದಲಿಗೆ ಈ ಹಾಡನ್ನು ನೋಡೋಣ: ತುತ್ತುರು ತೂರೆಂದು ಬತ್ತಿಸರಾಗಗಳನ್ನು ಚಿತ್ತಜ ಜನಕ ತನ್ನ ಕೊಳಲಲ್ಲೂದಿದನು ಕೊಳಲನ್ನು ನುಡಿಸುವಾದ ತುರ್-ತುರ್ ಎಂಬ ಸದ್ದಿನೊಡನೆ ಬರುವಂತಹ ರಂಜಕ ಪ್ರಯೋಗಗಳನ್ನು ಮಾಡುವ ಕೊಳಲು ವಾದಕರನ್ನು ನಾವು ನೋಡಿದ್ದೇವೆ. ಕೃಷ್ಣನು ಒಬ್ಬ ಚತುರ ಕೊಳಲು ನುಡಿಸುವ ಸಂಗೀತಗಾರನಾಗಿದ್ದ ಎನ್ನುವುದು ಪರಂಪರೆಯಿಂದ ಬಂದ ನಂಬಿಕೆ. ಆದರೆ, ಕೃಷ್ಣನು ಕೊಳಲು ನುಡಿಸಿದ್ದನ್ನು ನಾವಾರೂ ಕಂಡಿಲ್ಲ. ೧೫-೧೬ನೇ ಶತಮಾನದಲ್ಲಿ ಕೃಷ್ಣನ ಬಗ್ಗೆ ಹಾಡುವ ಪುರಂದರದಾಸರು, ಕೊಳಲು ನುಡಿವಲ್ಲಿ ಇಂತಹ ಪ್ರಯೋಗಗಳ ಬಗ್ಗೆ ಬರೆದಿದ್ದಾರೆಂದರೆ, ಅಂತಹ ಪ್ರಯೋಗಗಳನ್ನು ಕೊಳಲುವಾದಕರು ಸುಮಾರು ಐದುನೂರು ವರ್ಷಗಳಿಂದಲಾದರೂ ಮಾಡಿಕೊಂಡೇ ಬಂದಿದ್ದಾರೆ ಎನ್ನುವುದು ಮನದಟ್ಟಾಗುತ್ತದೆ. ಅಂದರೆ, ಪುರಂದರರು ತಾವು ಕಂಡ ಕೊಳಲು ನುಡಿಸುವ ವಿಧಾನವೊಂದನ್ನು ಕೃಷ್ಣನ ಕೊಳಲಲ್ಲಿ ತೋರಿಸಿದ್ದಾರೆಂದು ಹೇಳಬಹುದು. ಈ ಕಾರಣಕ್ಕಾಗಿಯೇ ದಾಸ ಸಾಹಿತ್ಯವನ್ನು ನಾವು ಆ ಕಾಲಕ್ಕೊಂದು ಕನ್ನಡಿ ಎಂದು ಹೇಳುವುದು ಸರಿಯಾದ ಮಾತು. ಈ ಹಾಡು ಇನ್ನೂ ಇನ್ನೊಂದು ಬಗೆಯಲ್ಲಿ ಸಂಗೀತಾಭ್ಯಾಸಿಗಳಿಗೆ ಹೆಚ್ಚಾಯದ್ದಾಗುತ್ತೆ. ಪುರಂದರದಾಸರು ಲಕ್ಷಗಟ್ಟಲೆ ರಚನೆಗಳನ್ನು ಮಾಡಿದ್ದಾರೆಂದು ಪ್ರತೀತಿ ಇದೆ. ಆದರೆ, ಈಗ ನಮಗೆ ದೊರಕುವುದು ಒಂದೆರಡು ಸಾವಿರಗಳಷ್ಟು ಮಾತ್ರ. ಪುರಂದರದಾಸರನ್ನು ನಾವು ’ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯುವುದು ನಿಜವಾದರೂ, ಅವರು ತಮ್ಮ ರಚನೆಗಳನ್ನು ಹಾಡುತ್ತಿದ್ದ ಮೂಲ ಮಟ್ಟು ಮುಕ್ಕಾಲುಪಾಲು ರಚನೆಗಳಿಗೆ ನಮ್ಮ ಕಾಲದವರೆಗೆ ಉಳಿದಿಲ್ಲ. ಆದರೆ, ಅವರ ಹಾಡುಗಳಲ್ಲಿರುವ ಒಳಗಿನ ಕುರುಹುಗಳಿಂದ ನಾವು ಅಂದಿನ ಕಾಲದ ಸಂಗೀತದ ಬಗ್ಗೆ ಹಲವು ವಿಚಾರಗಳನ್ನು ಅರಿಯಹುದಾಗಿದೆ. ಅಂತಹ ಹಾಡುಗಳಲ್ಲಿ, ’ತುತ್ತುರು ತೂರೆಂದು ಬತ್ತಿಸರಾಗಗಳನ್ನು’ ಎಂದು ಮೊದಲಾಗುವ ಈ ಹಾಡೂ ಒಂದಾಗಿದೆ. ಭಾರತೀಯ ಸಂಗೀತದಲ್ಲಿ, ಬಹಳ ಕಾಲದಿಂದ ಪ್ರಮುಖ ರಾಗಗಳು ಮೂವತ್ತೆರಡು ಎಂದು ಗುರುತಿಸಿರುವುದು ಕಂಡುಬರುತ್ತದೆ. ಪುರಂದರ ದಾಸರಿಗೂ ನೂರಾರು ವರ್ಷಗಳ ಮೊದಲೇ ಭಕ್ತಿ ಭಾಂಡಾರಿ ಬಸವಣ್ಣ (ಕ್ರಿ.ಶ.೧೧೩೪-೧೧೯೬) ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ. ಎನ್ನ ಕಾಯವ ದಂಡಿಗೆಯ ಮಾಡಯ್ಯ ಎನ್ನ ಶಿರವ ಸೋರೆಯ ಮಾಡಯ್ಯ ಎನ್ನ ನರಗಳ ತಂತಿಯ ಮಾಡಯ್ಯ ಬತ್ತೀಸ ರಾಗವ ಹಾಡಯ್ಯ ಉರದಲೊತ್ತಿ ಬಾರಿಸು ಕೂಡಲಸಂಗಮದೇವ! ಬಸವಣ್ಣ ’ಬತ್ತೀಸ ರಾಗವ ಹಾಡಯ್ಯ’ ಎಂದು ನುಡಿದರೂ ಕೂಡ, ಯಾವ ರಾಗಗಳನ್ನೂ ಹೆಸರಿಸುವುದಿಲ್ಲ. ವಚನಗಳನ್ನು ಹಾಡುವುದಕ್ಕಿಂತ ಹೇಳುವುದು ಪದ್ಧತಿಯಾಗಿದ್ದರಿಂದ, ಸಂಗೀತದ ಹೆಚ್ಚಿನ ಪ್ರಸ್ತುತಿ ಅದರಲ್ಲಿ ಕಾಣದಿದ್ದರೆ ಅದರಲ್ಲಿ ಅಚ್ಚರಿಯಿಲ್ಲ. ಆದರೆ, ಪುರಂದರ ದಾಸರು ಸಂಗೀತಗಾರರಾದ್ದರಿಂದ ಅವರ ರಚನೆಯಲ್ಲಿ ಈ ರಾಗಗಳ ಬಗ್ಗೆ ಹೆಚ್ಚಿನ ವಿವರವು ಸಿಗಬಹುದು ಎಂಬ ಊಹೆ ನೀವು ಮಾಡಿದ್ದರೆ ತಪ್ಪಿಲ್ಲ! ಆದರೆ ಮೂವತ್ತೆರಡನ್ನೂ ಅವರು ಈ ಹಾಡಿನಲ್ಲಿ ಹೆಸರಿಸುವುದಿಲ್ಲ ಅನ್ನುವುದು ನಮ್ಮ ದುರದೃಷ್ಟ. ’ತುತ್ತುರು ತೂರೆಂದು ಬತ್ತಿಸ ರಾಗಗಳನ್ನು..’ ಎನ್ನುವ ಪದದ ಮೊದಲ ಚರಣ ಹೀಗಿದೆ: ಗೌಳ ನಾಟಿ ಆಹೇರಿ ಗುರ್ಜರಿ ಮಾಳವಿ ಸಾರಂಗ ರಾಗ ಕೇಳಿ ರಮಣಿಯರತಿ ದೂರದಿಂದ ಫಲಮಂಜರಿ ಗೌಳಿ ದೇಶಾಕ್ಷಿ ರಾಗಗಳನು ನಳಿನನಾಭನು ತನ್ನ ಕೊಳಲಲೂದಿದನು ಅಂದರೆ, ಮೂವತ್ತೆರಡಲ್ಲದಿದ್ದರೂ ಈ ಕೆಳಗಿನ ಒಂಬತ್ತು ರಾಗಗಳನ್ನಾದರೂ ನಾವು ಈ ಹಾಡಿನಲ್ಲಿ ಕಾಣುತ್ತೇವೆ ಎನ್ನುವುದಕ್ಕೆ ನಾವು ಸಂತಸ ಪಡಬೇಕು. ೧. ಗೌಳ ೨. ನಾಟಿ ೩. ಆಹೇರಿ ೪. ಗುರ್ಜರಿ ೫. ಮಾಳವಿ ೬. ಸಾರಂಗ ೭. ಫಲಮಂಜರಿ ೮. ಗೌಳಿ ೯. ದೇಶಾಕ್ಷಿ ಆದರೆ, ಪುರಂದರ ದಾಸರು ಇನ್ನೂ ಕೆಲವು ರಚನೆಗಳಲ್ಲಿ ರಾಗಗಳ ಹೆಸರನ್ನು ಹೇಳಿರುವುದು ನಮಗೆ ಅದೃಷ್ಟದ ಸಂಗತಿ. ’ನಳಿನಜಾಂಡ ತಲೆಯ ತೂಗಿ’ ಎಂದು ಮೊದಲಾಗುವ ರಚನೆಯ ಮೊದಲ ಚರಣ ಹೀಗಿದೆ: ಮಾರವಿ ದೇಶಿ ಗುರ್ಜರಿ ಭೈರವಿ ಗೌಳಿ ನಾಟಿ ಸಾವೇರಿ ಆಹೇರಿ ಪೂರ್ವಿ ಕಾಂಭೋಜಿ ಪಾಡಿ ದೇಶಾಕ್ಷೀ ಶಂಕರಾಭರಣ ಮಾಳವ ವರಾಳಿ ಕಲ್ಯಾಣಿ ತೋಡಿ ಮುಖಾರಿಯರಳಿ ವಸಂತ ಬೌಳಿ ಧನ್ಯಾಸಿ ಸೌರಾಷ್ಟ್ರ ಗುಂಡಕ್ರಿಯ ರಾಮಕ್ರಿಯ ಮೇಘ ಕುರಂಜಿಯು ಪಾಡಲು ನೋಡಿ! ಮೊದಲ ಹಾಡಿನಲ್ಲಿಯೇ ಹೇಳಿದ್ದ ರಾಗಗಳನ್ನು ಬಿಟ್ಟು ಹೊಸ ರಾಗಗಳನ್ನು ಪಟ್ಟಿ ಮಾಡುತ್ತಾ ಹೋಗೋಣ: ೧೦. ಮಾರವಿ ೧೧. ದೇಶಿ * ಗುರ್ಜರಿ (ಮೊದಲೇ ಹೇಳಿದೆ) ೧೨. ಭೈರವಿ * ಗೌಳಿ * ನಾಟಿ ೧೩. ಸಾವೇರಿ * ಆಹೇರಿ ೧೪. ಪೂರ್ವಿ ೧೫. ಕಾಂಭೋಜಿ ೧೬. ಪಾಡಿ * ದೇಶಾಕ್ಷಿ ೧೭. ಶಂಕರಾಭರಣ ೧೮. ಮಾಳವ ೧೯. ವರಾಳಿ ೨೦. ಕಲ್ಯಾಣಿ ೨೧. ತೋಡಿ ೨೨. ಮುಖಾರಿ ೨೩. ವಸಂತ ೨೪. ಬೌಳಿ ೨೫. ಧನ್ಯಾಸಿ ೨೬. ಸೌರಾಷ್ಟ್ರ ೨೭. ಗುಂಡಕ್ರಿಯ ೨೮. ರಾಮಕ್ರಿಯ ೨೯. ಮೇಘ ೩೦. ಕುರಂಜಿ ಈ ಎರಡು ಹಾಡುಗಳಿಂದಲೇ ಮೂವತ್ತು ರಾಗಗಳ ಪಟ್ಟಿ ನಮಗೆ ಸಿಕ್ಕಿದೆ. ಇನ್ನು ’ಅಂಗನೆಯರೆಲ್ಲರು ನೆರೆದು’ ಎಂದು ಮೊದಲಾಗುವ ರಚನೆಯ ಚರಣವೊಂದನ್ನು ನೋಡೋಣ: ಪಾಡಿ ಮಲಹರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು ಈ ಸಾಲುಗಳನ್ನು ನೋಡಿದಾಗ, ಮಲಹರಿ ಎಂಬ ರಾಗವೊಂದನ್ನು ಬಿಟ್ಟು ಉಳಿದವೆಲ್ಲ ಮೊದಲಿನ ಎರಡು ರಚನೆಗಳಲ್ಲೇ ಕಂಡುಬಂದಿವೆಂದು ತಿಳಿಯುವುದು. ೩೧. ಮಲಹರಿ ಪುರಂದರ ದಾಸರು ’ರಂಗ ಕೊಳಲಲೂದಲಾಗಿ’ ಎನ್ನುವ ಇನ್ನೊಂದು ಪದದಲ್ಲಿಯೂ, ಅವನ ಕೊಳಲ ನಾದಕ್ಕೆ ಹೇಗೆ ಪ್ರಾಣಿ ಪಕ್ಷಿಗಳೂ, ನಿರ್ಜೀವ ವಸ್ತುಗಳೂ ಮರುಳಾದವು ಎಂದು ವಿವರಿಸುತ್ತಾರೆ. ಅದರ ಕಡೆಯಲ್ಲಿ, ಅಂಕಿತ ಬರುವ ಚರಣದ ಎರಡು ಸಾಲುಗಳು ಹೀಗಿವೆ: ಧಾಮ ವನಮಾಲೆ ಬಹಿರ್ಭೂಶಿತ ಸ್ವಾಮಿ ಪುರಂದರ ವಿಟ್ಠಲರಾಯನು ರಾಮಕ್ರಿಯ ಮೇಘರಂಜನಿ ಪಾಡೆ ಸಾಮವೇದ ನಮೋ ನಮೋ ಎನ್ನೆ ಇಲ್ಲಿ ಹೇಳಿದ ರಾಮಕ್ರಿಯ ಎನ್ನುವ ರಾಗವನ್ನು ಆಗಲೇ ಪಟ್ಟಿ ಮಾಡಿದ್ದೇವೆ. ಉಳಿದದ್ದೆಂದರೆ ೩೨: ಮೇಘರಂಜನಿ ಹೀಗೆ, ಪುರಂದರದಾಸರ ರಚನೆಗಳಿಂದಲೇ, ಅವರ ಕಾಲದ ಹಲವು ಪ್ರಸಿದ್ಧ ರಾಗಗಳನ್ನು ನಾವು ಹೆಕ್ಕಿತೆಗೆದಿದ್ದಾಗಿದೆ. ಈ ಮೂವತ್ತೆರಡೇ, ಪೂರ್ವಪ್ರಸಿದ್ಧ ಬತ್ತೀಸರಾಗಗಳಾಗಿದ್ದಿರಬಹುದು ಎನ್ನುವುದು ನನ್ನ ಊಹೆ. ಕಾಲ-ಕಾಲಕ್ಕೆ ಜನರ ಮೆಚ್ಚಿಗೆ ಪಡೆಯುವ ರಾಗಗಳು ಬದಲಾಗುವುದು ಸಹಜವೂ ಆಗಿದೆ. ಹಾಗಾಗಿ ಬಸವಣ್ಣನವರು ಹೇಳಿದ ಬತ್ತೀಸ ರಾಗಗಳೂ, ಪುರಂದರ ದಾಸರ ಕಾಲದ ಬತ್ತೀಸ ರಾಗಗಳೂ ಒಂದೇ ಆಗಿರಬೇಕಿಲ್ಲ. ಆದರೆ, ಪುರಂದರ ದಾಸರ ರಚನೆಗಳಲ್ಲಿ ಕಂಡು ಬರುವ ಈ ಸಾಕ್ಷಿಗಳಿಂದ, ಅವರ ಕಾಲದಲ್ಲಿದ್ದ ಬತ್ತೀಸರಾಗಗಳು ಈ ಬರಹದಲ್ಲಿರುವ ಪಟ್ಟಿಯಂತೇ ಇದ್ದಿರಬೇಕು ಎನ್ನುವುದು ಯೋಚಿಸಬೇಕಾದ ವಿಚಾರ. ಹಾಗೆ ಅಲ್ಲ ಎಂದು ಹೇಳುವುದಕ್ಕೆ ಸಾಕ್ಷಿ-ಆಧಾರಗಳು ಸಿಗುವ ಹೊರತು, ಈ ಪಟ್ಟಿಯನ್ನು ೧೫-೧೬ನೇ ಶತಮಾನದಲ್ಲಿ ಜನಪ್ರಿಯವಾದ ಮೂವತ್ತೆರಡು ರಾಗಗಳು ಎಂದು ಎಣಿಸುವುದರಲ್ಲಿ ತಪ್ಪೇನಿಲ್ಲ. -ಹಂಸಾನಂದಿ