ಸ್ಮರಿಸಿ ಬದುಕಿರೋ

ಸ್ಮರಿಸಿ ಬದುಕಿರೋ

ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ ||

ದಾಸರಾಯನ ದಯವ ಸೂಸಿಪಡೆದನ
ದೋಷರಹಿತನ ಸಂತೋಷಭರಿತನ || ೧ ||

ಜ್ಞಾನವಂತನ ಬಲುನಿಧಾನಿ ಶಾಂತನ
ಮಾನವಂತನ ಬಲುವದಾನ್ಯ ದಾಂತನ || ೨ ||

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || ೩ ||

ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನವಿಷಾದಮರೆತನ || ೪ ||

ಇವರ ನಂಬಿದ ಜನಕೆ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು || ೫ ||

ಪಾಪಕೋಟಿಯ ರಾಶಿ ಲೇಪವಾಗದೊ
ತಾಪಕಳೆವನೋ ಬಲುದಯಾಪಯೋನಿಧಿ || ೬ ||

ಕವನರೂಪದಿ ಹರಿಯ ಸ್ತವನಮಾಡಿದ
ಭುವನ ಬೇಡಿದ ಮಾಧವನ ನೋಡಿದ || ೭ ||

ರಂಗನೆಂದನ ಭವವು ಹಿಂಗಿತೆಂದನ
ಮಂಗಳಾಂಗನ ಅಂತರಂಗವರಿತನ || ೮ ||

ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನ ಉಲ್ಲಾಸತನದಲಿ || ೯ ||

ಚಿಂತೆ ಬ್ಯಾಡಿರೊ ನಿಶ್ಚಿಂತರಾಗಿರೊ
ಶಾಂತ ಗುರುಗಳ ಪಾದವಂತು ನಂಬಿರೋ || ೧೦ ||

ಖೇದವಾಗದೊ ನಿಮಗೆ ಮೋದವಾಹುದೊ
ಆದಿದೇವನ ಸುಪ್ರಸಾದವಾಹುದೊ || ೧೧ ||

ತಾಪ ತಡೆವನೊ ಬಂದ ಪಾಪ ಕಡಿವನೊ
ಶ್ರೀಪತಿಯಪಾದ ಸಮೀಪವಿಡುವನೋ || ೧೨ ||

ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ
ರಂಗನೊಲಿಯನೊ ಭಕ್ತಸಂಗದೊರೆಯದೇ || ೧೩ ||

ವೇದ ಓದಲು ಬರಿದೆ ವಾದಮಾಡಲು
ಹಾದಿಯಾಗದೊ ಬುಧರ ಪಾದ ನಂಬದೆ || ೧೪ ||

ಲೆಕ್ಕವಿಲ್ಲದಾ ದೇಶ ತುಕ್ಕಿಬಂದರು
ದುಃಖವಲ್ಲದೆ ಲೇಶ ಭಕುತಿ ದೊರೆಯದೊ || ೧೫ ||

ದಾನ ಮಾಡಲು ದಿವ್ಯಗಾನಪಾಡಲು
ಜ್ಞಾನ ದೊರೆಯದೊ ಇವರ ಅಧೀನವಾಗದೆ || ೧೬ ||

ನಿಷ್ಠೆಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟಗುರುಗಳ ಪಾದ ಮುಟ್ಟಿಭಜಿಸಿರೊ || ೧೭ ||

ಪೂಜೆ ಮಾಡಲು ಕಂಡ ಗೋಜುಬೀಳಲು
ಬೀಜಮಾತಿನ ಫಲಸಹಜ ದೊರೆಯದು || ೧೮ ||

ಸುರಸು ಎಲ್ಲರು ಇವರ ಕರವ ಪಿಡಿವರೊ
ತರಳರಂದದಿ ಹಿಂದೆ ತಿರುಗುತಿಪ್ಪರೊ || ೧೯ ||

ಗ್ರಹಗಳೆಲ್ಲವು ಇವರ್ಗೆ ಸಹಾಯ ಮಾಡುತ
ಅಹೋರಾತ್ರಿಲಿ ಸುಖದ ನಿವಹ ಕೊಡುವವೊ || ೨೦ ||

ವ್ಯಾಧಿ ಬಾರದೊ ದೇಹ ಬಾಧೆ ತಟ್ಟದೊ
ಆದಿದೇವನ ಸುಪ್ರಸಾದವಾಹುದೊ || ೨೧ ||

ಪತಿತಪಾಮರ ಮಂದಮತಿಯು ನಾ ಬಲು
ತುತಿಸಲಾಪೆನೆ ಇವರ ಅತಿಶಯಂಗಳ || ೨೨ ||

ಕರುಣದಿಂದಲಿ ಎಮ್ಮ ಪೊರೆವನಲ್ಲದೆ
ದುರಿತಕೋಟಿಯ ಬ್ಯಾಗ ತರಿವ ದಯದಲಿ || ೨೩ ||

ಮಂದಮತಿಗಳು ಇವರ ಚೆಂದವರಿಯದೆ
ನಿಂದೆ ಮಾಡಲು ಭವದಬಂಧ ತಪ್ಪದೊ || ೨೪ ||

ಇಂದಿರಾಪತಿ ಇವರ ಮುಂದೆ ಕುಣಿವನೊ
ಅಂದವಚನವ ನಿಜಕೆ ತಂದು ಕೊಡುವನೊ || ೨೫ ||

ಉದಯ ಕಾಲದಿ ಈ ಪದವ ಪಠಿಸಲು
ಮದಡನಾದರು ಜ್ಞಾನ ಉದಯವಾಹುದೊ || ೨೬ ||

ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೊ
ಪಠಿಸಬಹುದಿದು ಕೇಳಿ ಕುಟಿಲರಹಿತರು || ೨೭ ||

|| ಇತಿ ಶ್ರೀವ್ಯಾಸವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ವಿರಚಿತ ವಿಜಯದಾಸರ ಕವಚ ಸಾಮಾಪ್ತವಾಯಿತು ||

ದಾಸ ಸಾಹಿತ್ಯ ಪ್ರಕಾರ
Submitted by venkatb83 Mon, 11/07/2011 - 13:52

ಇವರೇ

ದಾಸನಾಗು ವಿಶೇಷನಾಗು -
ದಾಸರ ಬಹು ಜನಪ್ರಿಯ ಈ ಗೀತೆಯನ್ನ ಹಲವಾರು ಸಾರಿ ನಾ ಕೇಳಿದ್ದೇನೆ. ಈಗ ನೀವು ಅದರ ಗೀತ ಸಾಹಿತ್ಯವನ್ನ ಇಲ್ಲಿ ನೀಡಿದ್ದು ನನಗೆ ಇಸ್ಟವಾಯುತು. ಈ ಗೀತೆ ಬಹು ಅರ್ಥಪೂರ್ಣವಾಗಿದ್ದು ಇದನ್ನು ಕೇಳಿದಾಗ-ಓದಿದಾಗ ಮನಸ್ಸಿಗೆ ಬಹು ಆನಂದವಾಗುತ್ತದೆ, ಭಕ್ತಿಯಲ್ಲಿ ಮೈ ಮರೆಯುವಂತಾಗುತ್ತೆ.
ನಿಮಗೆ

ಧನ್ಯವಾದಗಳು