ಹರಿದಾಸರು ಕಂಡ ಶಿವ - ಶಿವರಾತ್ರಿಗೆ ಶಿವಸ್ಮರಣೆ...

ಹರಿದಾಸರು ಕಂಡ ಶಿವ - ಶಿವರಾತ್ರಿಗೆ ಶಿವಸ್ಮರಣೆ...

ವಾಮದೇವ ವಿರಿಂಚಿ ತನಯ ಉ ಮಾಮನೋಹರ ಉಗ್ರ ಧೂರ್ಜಟಿ ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ಕಾಮಹರ ಕೈಲಾಸ ಮಂದಿರ ಸೋಮಸೂರ್ಯಾನಳವಿಲೋಚನ ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ ಜಗನ್ನಾಥದಾಸರು ಹರಿಕಥಾಮೃತ ಸಾರದ ನಾಂದಿ ಸಂಧಿಯಲ್ಲಿ ಶಿವನ ಹನ್ನೊಂದು ಹೆಸರುಗಳನ್ನು ಚಮತ್ಕಾರಿಕವಾಗಿ ಹೆಣೆದು ಏಕಾದಶ ರುದ್ರರನ್ನೂ ನೆನಪಿಸಿ ಸದಾ ಸುಮಂಗಳವನ್ನು ಕೊಡು ಎಂದು ಶಿವನನ್ನು ಪ್ರಾರ್ಥಿಸುವ ಪದ್ಯ ಇದು. ಹರಿದಾಸರೆಲ್ಲ ಹರಿಯ ದಾಸರು, ವೈಷ್ಣವರು. ಆದರೆ ಅವರಲ್ಲಿ ತಮಿಳುನಾಡಿನ ಶೈವ-ವೈಷ್ಣವ ದ್ವೇಶಗಳಲ್ಲಿ ಕಾಣುವ ಶಿವದ್ವೇಶವಿಲ್ಲ. ಬದಲಿಗೆ ಶಿವ ಅವರಿಗೆ ಪರಮ ವೈಷ್ಣವ, ವಾಮದೇವ. ಶಿವ ಮುಕ್ತಿಯನ್ನು ಕೊಡುವವನಲ್ಲ, ಬದಲಿಗೆ ಅವನೇ ಮುಂದೆ ಶೇಷನಾಗಿ ತನ್ನ ಮುಕ್ತಿಯನ್ನು ಹೊಂದುವವ. ಅವನು ನರೋತ್ತಮ, ಉಳಿದವರಿಗೆಲ್ಲ ಮುಕ್ತಿಯ ಹಾದಿಯನ್ನು ತೋರಿಸುವವನೂ ಹೌದು. ಕಾಶಿ ವಿಶ್ವನಾಥ ಜಟಾ ಜೂಟಿಯಾಗಿ ಕಾಶಿಯ ಬೀದಿ ಬೀದಿಗಳಲ್ಲಿ ಸಂಚರಿಸುತ್ತಿರುತ್ತಾನಂತೆ. ಕಾಶಿಯಲ್ಲಿ ಸಾಯುವವರ ಕಿವಿಯಲ್ಲಿ ರಾಮ ಮಂತ್ರವನ್ನು ಜಪಿಸಿ ಅವರನ್ನು ಮುಕ್ತಿ ಪಥದೆಡೆಗೆ ನಡೆಸುತ್ತಾನಂತೆ. ಹರನೊಳಗೆ ನಿಂತು ಪ್ರಳಯವನ್ನು ನಡೆಸುವಾತನೂ ಶ್ರೀ ಹರಿಯೆ. ಬ್ರಹ್ಮಾಂಡದ ಒಳಗೆ ನಡೆಯುವ ಪ್ರಳಯ ಶಿವನ ತಾಂಡವವಾದರೆ, ಬ್ರಹ್ಮಾಂಡದ ಒಳಗೂ ಹೊರಗೂ ಪ್ರಳಯವನ್ನು ಮಾಡುವವ ನರಸಿಂಹ, ಅವನೂ ಸೋಮಸೂರ್ಯಾನಳವಿಲೋಚನನೆ! ಜಗನ್ನಾಥ ದಾಸರು ಅದೇ ಹರಿಕಥಾಮೃತಸಾರದ ಇನ್ನೊಂದು ಪದ್ಯದಲ್ಲಿ ಸೂಚ್ಯವಾಗಿ ಇದನ್ನು ಹೇಳುತ್ತಾರೆ, ಜಗವನೆಲ್ಲವ ನಿರ್ಮಿಸುವ ನಾ ಲ್ಮೊಗನೊಳಗೆ ತಾನಿದ್ದು ಸಲಹುವ ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ ಸ್ವಗತಭೇದವಿವರ್ಜಿತನು ಸ ರ್ವಗ ಸದಾನಂದೈಕದೇಹನು ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ ಗರುಡ ಶೇಷರೊಡನೆ ಶಿವ ಅಹಂಕಾರ ತತ್ವದ ಅಭಿಮಾನಿ. ಆಚಾರ್ಯ ಮಧ್ವರ ತತ್ವವಾದದಲ್ಲಿ ಅಹಂಕಾರದ ಅಳಿವು ಎಂದರೆ ನಾನೇ ಎನ್ನುವ ಯಥಾರ್ಥವಲ್ಲದ ಅಹಂಕಾರದ ಅಳಿವು. ನಾನು ಎನ್ನುವ ತನ್ನತನದ ಅರಿವಿನ ಸಾತ್ವಿಕ ಅಹಂಕಾರ ಯಥಾರ್ಥ ಜ್ಞಾನದ ಕಡೆಗೆ ನಡೆಸುವಂಥದ್ದು. ತನ್ನನ್ನೂ ಸೇರಿದಂತೆ ಸಕಲ ವಿಶ್ವದ ಒಳಗೂ ಹೊರಗೂ ತುಂಬಿದ ತತ್ವದ ಅಚಿಂತ್ಯಾದ್ಭುತ ಮಹಾತ್ಮ್ಯವನ್ನು ಅರಿತು ಅದರಲ್ಲಿ ಮಾಡುವ ಸ್ನೇಹವನ್ನು ಬೆಳೆಸುವಂಥದ್ದು. ವಾದಿರಾಜರು ಈ ಕೆಳಗಿನ ಪದದಲ್ಲಿ ಮಾಧವನನ್ನು ತೋರು ಎಂದು ಬೇಡುವದು ಅದೇ ಅಹಂಕಾರಾಭಿಮಾನಿ ರುದ್ರನನ್ನ. ಮಾಧವನನ್ನೇ ತೋರು ಎಂದೇಕೆ ಕೇಳುತ್ತಾರೆ ಎಂದು ಯೋಚಿಸಿದಾಗ ಹೊಳೆದದ್ದು, ಅಹಂಕಾರ ತತ್ವದ ಅಭಿಮಾನಿ ಲಕ್ಷ್ಮಿ-ನಾರಾಯಣ ರೂಪವೆಂದರೆ ಕಮಲಾ-ಮಾಧವ ರೂಪ ಎಂಬುದು. ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾ ಧವನ ತೋರೋ ಗುರುಕುಲೋತ್ತುಂಗಾ ಅರ್ಚಿಸಿದವರಿಗಭೀಷ್ಟವ ಕೊಡುವ ಹೆಚ್ಚಿನ ಅಘಗಳ ತರಿದು ಬಿಸುಟುವಾ ದುಶ್ಚರಿತಗಳೆಲ್ಲ ದೂರದಲ್ಲಿಡುವ ನ ಮ್ಮಚ್ಚುತಗಲ್ಲದ ಅಸುರರ ಬಡಿವಾ ಮಾರನ ಗೆದ್ದ ಮನೋಹರ ಮೂರ್ತಿ ಸಾಧು ಸಜ್ಜನರಿಗೆ ಸುರ ಚಕ್ರವರ್ತಿ ಧಾರುಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ ಮುರಾರಿಯ ತೋರಿಸಯ್ಯ ನಿಮಗೆ ಶರಣಾರ್ಥಿ ಚನ್ನ ಪ್ರಸನ್ನ ಶ್ರೀ ಹಯವದನನ್ನ ಅನುದಿನ ನೆನೆವಂತೆ ಮಾಡೊ ನೀ ಎನ್ನ ಅನ್ಯವಲ್ಲವೊ ನಾನು ಗುರುವೆಂಬೆ ನಿನ್ನ ಇನ್ನಾದರೂ ತೋರೋ ಧೀರ ಮುಕ್ಕಣ್ಣ ಅಹಂಕಾರಕ್ಕಭಿಮಾನಿಯಾದ ರುದ್ರದೇವ, ಮನಸ್ ತತ್ವದಭಿಮಾನಿಗಳಾದ ಇಂದ್ರ, ಕಾಮರಿಗಿಂತ ಮೇಲಿನವರು. ಅಂತೆಯೇ ಮನಸ್ಸಿನ ನಿಯಾಮಕರೂ ಹೌದು. ಎಲ್ಲೆಂದರಲ್ಲಿ ಹಾರಾಡುವ ಮನಸ್ಸಿಗೆ ಕಡಿವಾಣ ಹಾಕಿ ಬೇಕಾದಲ್ಲಿ ತೊಡಗಿಸುವವರು. ಅದಕ್ಕೆಂದೇ ಪುರಂದರ ದಾಸರು ’ಸತತ ಗಣನಾಥ ಸಿದ್ಧಿಯನೀವ’ ಎಂದು ಶುರುವಾಗುವ ಈ ಕೆಳಗಿನ ಪದದಲ್ಲಿ ಮಹರುದ್ರದೇವರು ಮುಕ್ತಿ ಪಥಕ್ಕೆ ಮನಸ್ಸು ಕೊಡುವಂಥವರು ಎನ್ನುತ್ತಾರೆ. ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ ಮತಿ ಪ್ರೇರಿಸುವಳು ಪಾರ್ವತಿ ದೇವಿ ಮು ಕುತಿ ಪಥಕೆ ಮನವೀವ ಮಹರುದ್ರ ದೇವರು ಹರಿಭ ಕುತಿದಾಯಕಳು ಭಾರತೀ ದೇವಿ, ಯು ಕುತಿ ಶಾಸ್ತ್ರಗಳಲ್ಲಿ ವನಜಸಂಭವನರಸಿ ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು ಗತಿ ಪಾಲಿಸುವ ನಮ್ಮ ಪವಮಾನನು ಚಿತ್ತದಲಿ ಆನಂದ ಸುಖವನೀವಳು ರಮಾ ಭಕ್ತ ಜನರೊಡೆಯ ನಮ್ಮ ಪುರಂದರ ವಿಠ್ಠಲನು ಸತತ ಇವರಲಿ ನಿಂತು ಈ ಕೃತಿಯ ನಡೆಸುವನು ಅದೇ ರೀತಿ, ಅತ್ತಿತ್ತ ಹರಿಯದೆ, ಏಕತ್ರವಾಗಿ ತೈಲ ಧಾರೆಯಂತೆ ಮನಸ್ಸನ್ನು ಶ್ರೀಹರಿಯಲ್ಲಿ ಕೊಡು ಎಂದು ವಿಜಯದಾಸರು ಅನನ್ಯವಾಗಿ ಪ್ರಾರ್ಥಿಸುತ್ತಾರೆ ಕೈಲಾಸ ವಾಸ ಗೌರೀಶ ಈಶ ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ ಅಹೋ ರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೆ ಅಹಿಭೂಷಣನೆ ಎನ್ನವಗುಣಗಳೆಣಿಸದಲೆ ವಿಹಿತ ಧರ್ಮದಿ ವಿಷ್ಣು ಭಕುತಿಯನು ಕೊಡು ಶಂಭೋ ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ ದನುಜ ಗಜ ಮದಹಾರಿ ದಂಡ ಪ್ರಣಮವ ಮಾಳ್ಪೆ ಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲಿ ಶಂಭೊ ಭಾಗೀರಥಿಧರನೆ ಭಯವ ಪರಿಹರಿಸಯ್ಯ ಲೇಸಾಗಿ ನೀ ಸಲಹೊ ಸಂತತ ಶರ್ವ ದೇವ ಭಾಗವತ ಜನಪ್ರೀಯ ವಿಜಯವಿಠ್ಠಲನಂಘ್ರಿ ಜಾಗು ಮಾಡದೆ ಭಜಿಪ ಭಾಗ್ಯವನೆ ಕೊಡು ಶಂಭೊ ಶಿವನು ಭಕ್ತರ ಮೊರೆಗೆ ಕರಗುವವನು, ಭಕ್ತ ಜನರ ಪರ. ವ್ಯಾಸರಾಯರು ಪಾರ್ವತಿ ಪತಿ ಶಿವನನ್ನು ನುತ ಜನ ಪಾಲನೆಂದು ಹಾಡುತ್ತ ರಮಾರಮಣನಲ್ಲಿ ಅಮಲ ಭಕ್ತಿಯನ್ನು ಕೊಡು ಎಂದು ಬೇಡುತ್ತಾರೆ. ಹಂಪಿಯ ವಿರೂಪಾಕ್ಷನನ್ನೇ ಪ್ರಾರ್ಥಿಸಿದ್ದರೇನೋ ಈ ಪದದಿಂದ. ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ ವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವ ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ ತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರಕೃಪಾ ಪಾತ್ರ ಜಗನ್ನಾಥದಾಸರ ಹರಿಕಥಾಮೃತಸಾರದ ಕಡೆಯ ಸಂಧಿಯ ಪದಗಳಿಂದ ಮಂಗಳಕರನಾದ ಶಿವನನ್ನು ಸ್ಮರಿಸುತ್ತ ಮುಗಿಸುತ್ತೇನೆ. ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು. ನಂದಿವಾಹನ ನಳಿನಿಧರ ಮೌ ಳೇಂದು ಶೇಖರ ಶಿವ ತ್ರಿಯಂಬಕ ಅಂಧಕಾಸುರ ಮಥನ ಗಜಶಾರ್ದೂಲ ಚರ್ಮಧರ ಮಂದಜಾಸನತನಯ ತ್ರಿಜಗ ದ್ವಂದ್ಯ ಶುದ್ಧಸ್ಫಟಿಕ ಸನ್ನಿಭ ವಂದಿಸುವೆನನವರತ ಪಾಲಿಸೋ ಪಾರ್ವತೀರಮಣ ಫಣಿಫಣಾಂಚಿತಮುಕುಟರಂಜಿತ ಕ್ವಣಿತಡಮರುತ್ರಿಶೂಲಶಿಖಿ ದಿನ ಮಣಿ ನಿಶಾಕರ ನೇತ್ರ ಪರಮ ಪವಿತ್ರ ಸುಚರಿತ್ರ ಪ್ರಣತ ಕಾಮದ ಪ್ರಮಥ ಸುರಮುನಿ ಗಣ ಸುಪೂಜಿತ ಚರಣಯುಗ ರಾ ವಣ ಮದವಿಭಂಜನ ಸತತ ಮಾಂಪಾಹಿ ಮಹದೇವ ದಕ್ಷಯಜ್ಞವಿಭಂಜನನೆ ವಿರು ಪಾಕ್ಷ ವೈರಾಗ್ಯಾಧಿಪತಿ ಸಂ ರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು ಯಕ್ಷಪತಿಸಖ ಯಜಿಪರಿಗೆ ಸುರ ವೃಕ್ಷ ವೃಕದನುಜಾರಿ ಲೋಕಾ ಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು
ಬಗೆ