ಪುರಂದರ ದಾಸರ ಸಾಹಿತ್ಯದಲ್ಲಿ ನೃತ್ಯ

ಪುರಂದರ ದಾಸರ ಸಾಹಿತ್ಯದಲ್ಲಿ ನೃತ್ಯ

ದಾಸಸಾಹಿತ್ಯ ನಡುಗನ್ನಡ ಕಾಲದಲ್ಲಿ ಆರಂಭವಾಗಿ ಸುಮಾರು ಇಪ್ಪತ್ತನೇ ಶತಮಾನದವರೆಗೂ ಬೆಳೆದು ಬಂದ ಕನ್ನಡ ಸಾಹಿತ್ಯ ಪ್ರಕಾರ. ದಾಸಸಾಹಿತ್ಯದ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಧರ್ಮ ಪ್ರಚಾರ ಮತ್ತು ಸಮಾಜ ಸುಧಾರಣೆ. ಈ ಕಾರ್ಯಕ್ಕೆ ಹರಿದಾಸರು ಉಪಯೋಗಿಸಿದ ಮಾಧ್ಯಮ ಸಂಗೀತ ಮತ್ತೆ ನೃತ್ಯದ್ದಾಗಿತ್ತು. ಗೆಜ್ಜೆ ಕಟ್ಟಿ ಕುಣಿಯುತ್ತ, ಹಾಡುತ್ತ ಬೀದಿಬೀದಿಯಲ್ಲಿ ತಿರುಗಿದ ಹರಿದಾಸರ ಬರವಣಿಗೆ ಅಂದಿನ ಸಮಾಜದ ಜನಜೀವನಕ್ಕೊಂದು ಕನ್ನಡಿ. ಆಗಿನ ಕಾಲದ ಎಷ್ಟೋ ಚಾರಿತ್ರಿಕ ಅಂಶಗಳನ್ನು ನಾವು ದಾಸರ ರಚನೆಗಳಿಂದ ಹೆಕ್ಕಿ ತೆಗೆಯಬಹುದಾಗಿದೆ. ಹರಿದಾಸರಲ್ಲೆಲ್ಲ ಹೆಚ್ಚಿನ ಹೆಸರು ಗಳಿಸಿದವರು ಪುರಂದರದಾಸರೇ. 'ದಾಸರೆಂದರೆ ಪುರಂದರದಾಸರಯ್ಯ' ಎಂದು ತಮ್ಮ ಗುರುಗಳಿಂದಲೇ ಹೊಗಳಿಸಿಕೊಂಡ ಮಹಾನುಭಾವರು ಇವರು. ಇವರ ನಂತರ ಬಂದ ದಾಸರೆಲ್ಲ ಪುರಂದರದಾಸರನ್ನೇ ಗುರುವನ್ನಾಗಿ ಭಾವಿಸಿ 'ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ', 'ಗುರು ಪುರಂದರ ದಾಸರೆ ನಿಮ್ಮ ಚರಣಕಮಲವ ನಂಬಿದೆ" ಎಂದು ಹಾಡಿದ್ದಾರೆ. ಪುರಂದರ ದಾಸರ ಸಾಹಿತ್ಯ ಕೃಷಿ ಬಹಳ ವಿಸ್ತಾರವಾದದ್ದು. ಆಗಿನ ಕಾಲದ ಜನಜೀವನದ ಹೊಳಹುಗಳನ್ನು ಇವರ ರಚನೆಗಳನ್ನು ನಾವು ಕಾಣಬಹುದು. ಇವರ ಹಾಡುಗಳಲ್ಲಿ ಬರುವ ನಾಟ್ಯ-ನೃತ್ಯದ ಬಗ್ಗೆಯ ಕೆಲವು ಅಂಶಗಳನ್ನು ಈ ಬರಹದಲ್ಲಿ ಗಮನಿಸೋಣ. ಪುರಂದರ ದಾಸರು ಹೆಚ್ಚಿನ ರಚನೆಗಳು ಸಹಜವಾಗೇ ಕೃಷ್ಣನ ಪರವಾಗಿರುವುದು ಈ ನಿಟ್ಟಿನಲ್ಲಿ ಅನುಕೂಲವೇ ಆಗಿದೆ. ಏಕೆಂದರೆ ಕೃಷ್ಣನು ತಾನೇ ಕಾಳಿಂಗನರ್ತನ ಮಾಡಿದ್ದು? 'ಆಡಿದನೋ ರಂಗ' ಎಂಬ ರಚನೆಯಲ್ಲಿ ಅವರು ಹೀಗೆ ಹಾಡುತ್ತಾರೆ: ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ! ಪಾಡಿದವರಿಗೆ ಬೇಡಿದ ವರಗಳ ನೀಡುತಲಿ ದಯ ಮಾಡುತಲಿ ನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ||ನಾಡಿದನೋ ರಂಗ|| ಅಂಬೋರುಹೋಧ್ಭವ ಅಖಿಲಸುರರು ಕೂಡಿ ಅಂಬರದಿಂದಲಿ ಅವರ ಸ್ತುತಿಸೆ ರಂಭೆ ಊರ್ವಶಿ ರಮಣಿಯರೆಲ್ಲರು ಚೆಂದದಿಂ ಭರತನಾಟ್ಯವ ನಟಿಸೆ ಝಂತಟ ತಕಧಿಮಿ ತದಿಂಗಿಣ ತೋಂ ಎಂದು ಜಂಪೆ ತಾಳದಿ ತುಂಬುರುನೊಪ್ಪಿಸೆ ದಾಮಪದಸರೀ ಎಂದು ಧ್ವನಿಯಿಂದ ತುಂಬುರು ನಾರದರು ಗಾನವ ಪಾಡಲು ನಂದಿಯು ಮದ್ದಳೆ ಚೆಂದದಿ ಹಾಕಲು ||ಆಡಿದನೋ ರಂಗ|| ನೋಡಿ - ಕೃಷ್ಣನು ಕಾಳಿಂಗನ ಮೇಲೆ ನರ್ತಿಸುವಾಗ ಅವನಿಗೆ ಹಿಮ್ಮೇಳವವಾಗಿ ಮದ್ದಳೆ ನುಡಿಸುವನು ಸಾಕ್ಷಾತ್ ಶಿವನ ವಾಹನ ನಂದಿ. ಹಾಡುವವರು ತುಂಬುರು ನಾರದರು. ಜೊತೆಯಲ್ಲಿ ನಟುವಾಂಗದ ಜತಿಗಳನ್ನೂ ತುಂಬುರುವೇ ಹೇಳುತ್ತಿದ್ದಾನೆ. ಊರ್ವಶಿ ರಂಭೆಯರು ಕೂಡ ಈ ಸಂಗೀತವನ್ನು ಕೇಳಿ ನರ್ತಿಸುತ್ತಿದ್ದಾರೆ. ಹೀಗೆ ಕೃಷ್ಣನ ನೃತ್ಯವನ್ನು ಪುರಂದರದಾಸರು ಕಣ್ಣಿಗೆ ಕಟ್ಟಿಸುತ್ತಾರೆ. ಇಷ್ಟೇ ಅಲ್ಲ, ಮುಂದಿನ ಚರಣದಲ್ಲಿ 'ಪೊಳೆಯುವ ಮುಖದಲಿ ಚಲಿಸುವ ನೀಲಕೇಶಗಳಾಡೆ ಕಾಲಂದುಗೆ ಗೆಜ್ಜೆ ಘಲುಘಲುರೆನ್ನುತ ಉಡಿಗೆಜ್ಜೆ ಗಂಟೆಗಳಾಡೆ' ಕೃಷ್ಣನು ಕಾಳಿಂಗನ ಹೆಡೆಯಮೇಲೆ ಕುಣಿಯುವ ನೋಟವನ್ನು ಬಣ್ಣಿಸುತ್ತಾರೆ. ನರ್ತಿಸುವಾಗ ತಲೆಗೂದಲನ್ನು ಕಟ್ಟದಿದ್ದರೆ ಅದು ಹೇಗೆ ಕುಣಿಯಬಹುದು ಎನ್ನುವುದರ ಭಾವ ಈ ಸಾಲಿನಲ್ಲಿ ಕಂಡು ಬರುತ್ತೆ. ಸೂಕ್ಷ್ಮ ವಿಷಯಗಳನ್ನೂ ದಾಸರು ಹೇಗೆ ಗಮನಿಸುತ್ತಾರೆ ಎನ್ನುವುದಕ್ಕೆ ಇದೊಂದು ಚಿಕ್ಕ ಉದಾಹರಣೆ. 'ಚಂದವ ನೋಡಿರೆ ಗೋಕುಲನಂದನ ಮೂರುತಿಯ' ಎನ್ನುವ ಹಾಡಿನಲ್ಲಿ ಅವರು "ಅಂದುಗೆ ಪಾಡಗ ಗೆಜ್ಜೆಯ ಧರಿಸಿ ಧಿಂದಿಮಿ ಧಿಮಿಕೆಂದು ಕುಣಿಯುವ ಕೃಷ್ಣನ ಚಂದವ ನೋಡಿರೆ" ಎಂದು ಉದ್ಗಾರ ಮಾಡುತ್ತಾರೆ. 'ಕಂಡೆನಾ ಕನಸಿನಲಿ ಗೋವಿಂದನ' ಎನ್ನುವ ರಚನೆಯಲ್ಲಿ "ಅಂದುಗೆಕಿರುಗೆಜ್ಜೆ ಘಲಿರೆಂಬೊ ವಾದ್ಯದಿ ಬಂದು ಕಾಳಿಂಗನ ಹೆಡೆಯೇರಿ ಧಿಮಿಧಿಮಿ ಧಿಮಿಕೆಂದು ತಾಳಗತಿಗಳಿಂದಾನಂದದಿ ಕುಣಿವ ಮುಕುಂದನ ಚರಣವ ಕಂಡೆನಾ ಕನಸಿನಲ್ಲಿ" ಎಂದು ಹಾಡುತ್ತಾರೆ. 'ಕಂಡೆನಾ ಉಡುಪಿಯ ಕೃಷ್ಣನಾ' ಎನ್ನುವ ಪದದಲ್ಲೂ ಧಿಮಿಧಿಮಿ ಧಿಮಿಕೆಂದು ಕುಣಿವ ಕೃಷ್ಣನ ಕಂಡೆ ಎಂದೆನ್ನುತ್ತಾರೆ. 'ಅಮ್ಮ ನಿಮ್ಮ ಮನೆಗಳಲ್ಲಿ ಎಮ್ಮಯ ಕೃಷ್ಣನ ಕಂಡಿರೇನೇ' ಎಂಬ ಹಾಡಿನಲ್ಲಿ "ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ ನೀಲವರ್ಣನು ನಾಟ್ಯಮಾಡುತಲಿ | ಮೇಲಾಗಿ ಬಾಯಲಿ ಜಗವನ್ನು ತೋರಿದ ಮೂಲೋಕದೊಡೆಯನ ಕಾಣಿರೇನೇ!" ಎಂದು ಕೇಳುತ್ತಾರೆ. ಹಾಗೇ 'ಕೃಷ್ಣ ಬಾರೋ' ಎನ್ನುವ ಹಾಡಿನಲ್ಲಿ "ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆ ನಾದಗಳಿಂದ ಕೃಷ್ಣ ಬಾರೋ" ಎಂದು ಹಾಡುತ್ತಾರೆ. ಕೃಷ್ಣನ ಮಹಾ ಭಕ್ತರಲ್ಲವೇ ದಾಸರು? ಅವನ ಕುಣಿತವನ್ನು ಬೆರಗಿನಿಂದ ಬಗೆ ಬಗೆಯಾಗಿ ವರ್ಣಿಸುವುದರಲ್ಲಿ ಅವರಿಗೆ ಅತೀ ಆಸಕ್ತಿ. 'ಕುಣಿದಾಡೋ ಕೃಷ್ಣ ಕುಣಿದಾಡೋ' ಎನ್ನುವ ಪದದಲ್ಲಿ "ಪೊಂಗೊಳಲಲಿ ರಾಗಂಗಳ ನುಡಿಸುತ ತ್ರಿಭಂಗಿಯಲಿ ನಿಂದು ಧಿಗಿಧಿತ್ತಾಂಗಿಟ ತಾಂಗಿಟ ತಕ ತಕ ಧಿಮಿಯೆಂದು" ಕುಣಿದಾಡಬೇಕೆಂದು ಕೃಷ್ಣನಿಗೆ ಹೇಳುತ್ತಾರೆ. ಈ ಹಾಡಿನ ಪ್ರತೀ ಚರಣದಲ್ಲಿಯೂ ಬೇರೆ ಬೇರೆ ಜತಿಗಳನ್ನು ಸೇರಿಸಿ, ಇಂತಹ ಜತಿಗಳಿಗೆ ಹೆಜ್ಜೆಯ ಹಾಕುತ್ತಾ ಬಾರೋ ಎಂದು ಅವರು ಕೃಷ್ಣನನ್ನು ಕರೆಯುವ ರೀತಿಯಲ್ಲೇ ಅವರಿಗೆ ನಾಟ್ಯದ ಬಗ್ಗೆ ಇದ್ದ ಒಳ್ಳೇ ಪರಿಚಯ ತಿಳಿದುಬರುತ್ತದೆ. ಅದೇ ರೀತಿಯಲ್ಲಿ 'ನಂದ ನಂದನ ಬಾರೋ' ಎನ್ನುವ ಪದದಲ್ಲಿ ಹೇಳುವ "ಘಮಘಮಘಮಘಮ ಘಮಪರಿಮಳದಿ ಅಮರರು ಮೃದಂಗ ತಾಳಗಳಿಂದ ಧಿಮಿಧಿಮಿ ಧಿಮಿಧಿಮಿ ಧಿಂಧಿಂ ಎನ್ನುತ" ಎನ್ನುವ ಮಾತಿನಲ್ಲಿ, ಅವರ ಕಾಲದಲ್ಲಿ ನೃತ್ಯಕ್ಕೆ, ಹಾಡಿಗೆ ಪಕ್ಕವಾದ್ಯವಾಗಿ ಮೃದಂಗದ ಬಳಕೆ ಆಗುತ್ತಿತ್ತೆಂಬುದು ತಿಳಿದುಬರುತ್ತದೆ. ಕುಣಿಯುವ ಕೃಷ್ಣನ ಚೆಲುವನ್ನು ಪುರಂದರ ದಾಸರ ಮಾತಿನಲ್ಲೇ ಕೇಳಿದರೆ ಸೊಗಸು. ಅವನು ಕುಣಿಯುವ ಚಂದವನ್ನು ಗೋಕುಲದ ಗೋಪಿಯರು ನೋಡಿ ಆನಂದ ಪಡುವುದನ್ನು ವರ್ಣಿಸುವ ಈ ಹಾಡಂತೂ ಓದುವಾಗಲೇ ಹೆಜ್ಜೆ ಹಾಕಬೇಕು ಎನ್ನಿಸುವಂತಹ ಒಳ್ಳೆಯ ಪ್ರಾಸದಿಂದ ಕೂಡಿದೆ: ತತ್ತತ ಧಿಮಿಕಿ ಧಿಮಿಕಿ ಎನುತ ಹರಿಯಾಡಿದನೇ! ಚಿತ್ತಜಪಿತನುತ್ತಮ ಗೊತ್ತುಗಳ್ ಕುತ್ತಿಗೆಯೊಳಗಾಡುತ ||ತತ್ತತ ಧಿಮಿತ|| ಹಾರಪದಕವು ಕೇಯೂರ ಕಿರೀಟವು ಧೀರಭಾಪುರಿ ಯದುವೀರ ಹೊಳೆಯುತಿರೆ ಮಾರಜನಕ ಸುಕುಮಾರ ಸಾರಗುಣಸಾಂದ್ರ ಮಹಿಮ ಹರಿ ||ತತ್ತತ ಧಿಮಿತ|| ಮಂದಗಮನೆಯರು ಬೃಂದಬೃಂದದಲಿ ಚಂದನೋಡುತಿರೆ ಆ ನಂದಗೋಪನ ಕಂದ ಮುಕುಂದ ನಿತ್ಯಾನಂದ || ತತ್ತತ ಧಿಮಿತ|| ಕಂಕಣ ವಂಕಿಯು ಕಿಂಕಿಣಿ ರವಗಳು ಶಂಖ ಚಕ್ರ ದಿವ್ಯ ಪಂಕಜ ಮಾಲೆಯು ಶಂಖಗಳ ಶ್ರೀ ಪುರಂದರ ವಿಠಲ ವೇದಾಂತ ವೇದ್ಯ ಕೃಷ್ಣ ||ತತ್ತತ ಧಿಮಿತ|| ಶ್ರೀಹರಿ ಕುಣಿಯುವುದು ಗೋಕುಲದಲ್ಲಿ ಮಾತ್ರವಲ್ಲ. ಹರಿ ಭಕ್ತರ ಮನೆಯಲ್ಲಿ, ಮನದಲ್ಲಿ ಕೂಡ ಅವನು ನೃತ್ಯ ಮಾಡುವಂತಹವನೇ! ಅಂತಹ ಒಂದು ನೋಟವನ್ನು ಪುರಂದರ ದಾಸರು ’ಹರಿ ಕುಣಿದ ನಮ್ಮ ಹರಿ ಕುಣಿದ’ ಎನ್ನುವ ಪದದಲ್ಲಿ ತೋರಿಸುತ್ತಾರೆ: ಹರಿ ಕುಣಿದ ನಮ್ಮ ಹರಿ ಕುಣಿದ! ಅಕಳಂಕ ಚರಿತ ಮಕರಕುಂಡಲಧರ ಸಕಲರ ಪಾಲಿಪ ಹರಿ ಕುಣಿದ|| ಅರಳೆಲೆ ಮಾಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದ|| ಉಟ್ಟ ಬಟ್ಟೆಯ ದಟ್ಟಿ ಇಟ್ಟ ಕಾಂಚಿಯ ಡಾಮ ದಿಟ್ಟ ಮಲ್ಲರ ಗಂಡ ಹರಿ ಕುಣಿದ || ಪರಮ ಭಾಗವತರ ಕೇರಿಯೊಳಾಡುವ ಪುರಂದರ ವಿಟ್ಠಲ ಹರಿ ಕುಣಿದ || ಈ ಹಾಡನ್ನು ಓದುತ್ತಲೇ ದಾಸರ ಕಣ್ಣುಮುಂದಾಡುವ ಕೃಷ್ಣನ ಮೂರುತಿ ನಮ್ಮ ಕಣ್ಣ ಮುಂದೇ ಬಂದಂದಾಗುವುದು. ಅಲ್ಲವೇ? ಹಾಗೆ ನೋಡಿದರೆ ಪುರಂದರ ದಾಸರ ನೃತ್ಯದ ವರ್ಣನೆ ಕೃಷ್ಣನೊಬ್ಬನಿಗೇ ಮೀಸಲಾಗಿಲ್ಲ. 'ಸುಂದರ ಮೂರುತಿ ಮುಖ್ಯಪ್ರಾಣ' ಅನ್ನುವ ರಚನೆಯಲ್ಲಿ ಅವರು "ಕಣಕಾಲಂದುಗೆ ಗೆಜ್ಜೆ ಝಣಝಣರೆನ್ನುತ, ಝಣಕು ಝಣಕುರೆಂದು ಕುಣಿಕುಣಿದಾಡುತ ಸುಂದರ ಮೂರುತಿ ಮುಖ್ಯಪ್ರಾಣ ಬಂದನಮ್ಮ ಮನೆಗೆ ರಾಮಧ್ಯಾನ ಧ್ವನಿಗೆ" ಎಂದು ರಾಮಭಕ್ತ ಹನುಮಂತನು ನರ್ತಿಸುವ ಪರಿಯನ್ನೂ ವರ್ಣಿಸುತ್ತಾರೆ. ಇನ್ನು ಹರಿದಾಸರು ದಾಸದೀಕ್ಷೆ ತೆಗೆದುಕೊಂಡಾಗಲೇ 'ಸಾಲ ಬೇಡೆನು, ಸಾಲದೆನೆನು, ನಾಳೆಗಿಡೆನು' ಮೊದಲಾದ ಪ್ರತಿಜ್ಞೆಗಳನ್ನು ಮಾಡುವಾಗಲೇ ಕಾಲಿಗೆ ಗೆಜ್ಜೆಯನ್ನೂ ಕಟ್ಟಿಕೊಳ್ಳುತ್ತಿದ್ದವರು. ಹಾಡು ಹಾಡುತ್ತಾ ಕುಣಿಯುತ್ತಾ ಉಂಛವೃತ್ತಿಗೆ ಬೀದಿ ಬೀದಿಗಳಲ್ಲಿ ಹೋಗುತ್ತಿದ್ದವರು. 'ರಂಗಯ್ಯ ನಿನ್ನ ಯಾರೇನೆಂದರೋ' ಎನ್ನುವ ಪದದಲ್ಲಿ ಪುರಂದರದಾಸರು ಗೆಜ್ಜೆ ಕಟ್ಟಿ ಕುಣಿಯುವ ದಾಸರ ಬಗ್ಗೆ ಹೀಗೆ ಹೇಳುತ್ತಾರೆ: ರಂಗಯ್ಯ ನಿನ್ನ ಯಾರೇನಂದರೋ? ಸಕಲ ಭಾಗವತರು ಗತಿತಾಳಮೇಳದಿಂದ ತಕಕಿಟ ಕಿಟತಕ ಧಿಮಿಕೆಂದು ಕುಣಿವಾಗ|| ಒಟ್ಟಿನಲ್ಲಿ ಪುರಂದರ ದಾಸರು ತಮ್ಮ ತತ್ವ ಪ್ರಚಾರಕ್ಕೂ ಸಮಾಜ ಸುಧಾರಣೆಗೂ ಸಂಗೀತ ನೃತ್ಯವನ್ನು ಒಂದು ಪ್ರಭಾವಯುತ ಮಾಧ್ಯಮವಾಗಿ ಬಳಸಿದರು ಎನ್ನಬಹುದು. ಮಾತಿನಲ್ಲಿ ಕೇಳುವುದಕ್ಕಿಂತ ಹಾಡಿನಲ್ಲಿ ಕೇಳುವುದು ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ನಿಲ್ಲಬಲ್ಲದು. ಹಾಡಿನ ಜೊತೆಗೆ ಅರ್ಥಪೂರ್ಣವಾದ ನೃತ್ಯವೂ ಸೇರಿದರೆ ಅದಕ್ಕಿಂತ ಹೆಚ್ಚೇನು ಬೇಕು? ಅಲ್ಲವೇ? ಪುರಂದರ ದಾಸರು ಒಂದು ಉಗಾಭೋಗದಲ್ಲಿ ಹೀಗೆ ಹಾಡುತ್ತಾರೆ: ತಂಬೂರಿ ಮೀಟಿದವ ಭವಾಬ್ದಿ ದಾಟಿದವ ಗೆಜ್ಜೆಯ ಕಟ್ಟಿದವ ಕಲ್ಮಶ ಮೆಟ್ಟಿದವ ಗಾನವ ಪಾಡಿದವ ಹರಿ ಮೂರುತಿ ನೋಡಿದವ ವಿಠಲನ ನೋಡಿದವ ವೈಕುಂಠಕೆ ಓಡಿದವ! ಹೀಗೆ ಪುರಂದರ ದಾಸರ ಹಾಡುಗಳನ್ನು ನೋಡುವಾಗಲೇ ಅವರು ನೃತ್ಯವನ್ನು ಮೂರು ಮಟ್ಟದಲ್ಲಿ ನೋಡುವುದು ಕಂಡು ಬರುತ್ತದೆ- ಜೀವನ ಪ್ರೀತಿ, ಹರಿ ಭಕ್ತಿ ಮತ್ತು ಮುಕ್ತಿಸಾಧನೆ. ಹರಿದಾಸರು ಸಂಸಾರವನ್ನು ಬಿಟ್ಟುಹೋಗಬೇಕೆಂದು ಹೇಳದೇ "ಈಸಬೇಕು, ಇದ್ದು ಜಯಿಸಬೇಕು" ಎನ್ನುವ ತತ್ವವನ್ನು ಪ್ರತಿಪಾದಿಸಿದವರು. ಸಾಮಾಜಿಕ ಬದಲಾವಣೆಗಳಿಗೆ ಅವರು ಮಾಡಿದ ಪ್ರಯತ್ನ, ಅದಕ್ಕೆ ಹಾಡು-ನೃತ್ಯಗಳನ್ನು ಬಳಸಿದ್ದು ಅವರ ಜೀವನ ಪ್ರೀತಿಗೆ ಸಾಕ್ಷಿ. ಮತ್ತೆ ಹರಿಭಕ್ತಿಯನ್ನು ಪ್ರಸರಿಸಲು ಅವರು ಗೆಜ್ಜೆ ಕಟ್ಟಿ ಕುಣಿದಿದ್ದೂ ಹೌದು. ಇನ್ನು ಗೆಜ್ಜೆಯ ಕಟ್ಟುವವರು ಜೀವನದ ತೊಂದರೆಗಳನ್ನು ತೊಂದರೆಗಳನ್ನೂ ಮೆಟ್ಟಿನಿಲ್ಲಬಲ್ಲರು ಎನ್ನುವುದು, ಅದರಿಂದ ವೈಕುಂಠ ಸೇರಬಲ್ಲವರು ಎನ್ನುವಾಗ ನೃತ್ಯವು ಮೋಕ್ಷಕ್ಕೂ ದಾರಿಯಾಗಬಹುದು ಎನ್ನುವ ಅಭಿಪ್ರಾಯವೂ ಕಂಡುಬರುತ್ತದೆ. ಒಟ್ಟಿನಲ್ಲಿ ಜನಸಾಮಾನ್ಯರನ್ನೂ ಭೌತಿಕ ಜಗತ್ತಿನಿಂದ ಪಾರಮಾರ್ಥದ ಕಡೆಗೆ ಕರೆದೊಯ್ಯುವ ಸಾಧನಗಳಲ್ಲಿ ನೃತ್ಯವೂ ಒಂದು ಎನ್ನುವುದು ಅಂದಿಗೂ, ಇಂದಿಗೂ, ಎಂದಿಗೂ ನಿಜವಾಗಿಯೇ ಉಳಿಯುತ್ತದೆ.