ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ಶ್ರೀಪಾದರಾಜರು ಮತ್ತು ಶ್ರೀವ್ಯಾಸರಾಜರು.

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ಶ್ರೀಪಾದರಾಜರು ಮತ್ತು ಶ್ರೀವ್ಯಾಸರಾಜರು.

ಯುಗ ಯುಗಗಳಿಂದ ಗಾಢ-ಗೂಢವಾಗಿಯೇ ಉಳಿದ ಸಂಸ್ಕೃತದ ಮಹಾಮಂತ್ರಗಳನ್ನು, ಘನ ವಿಚಾರಗಳನ್ನು, ಸಾಮಾನ್ಯ ಜನರಿಗೂ ಅರ್ಥವಾಗುವ ತಿಳಿಗನ್ನಡದಲ್ಲಿ ಹಾಡು ಹೇಳುವ ಸಂಪ್ರದಾಯವನ್ನು ಶ್ರೀಪಾದರಾಜರು ವ್ಯಾಪಕವಾಗಿ ಪ್ರಾರಂಭಿಸಿದರು. ಕೃಷ್ಣ ಪ್ರೇಮದ ಗೋಪಿಗೀತ, ಭ್ರಮರಗೀತ, ವೇಣುಗೀತಗಳನ್ನು ಕನ್ನಡದಲ್ಲಿ ಹೃದ್ಯಪದ್ಯಗಳನ್ನಾಗಿ ಬರೆದರು. "ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ, ಬಾರೋ ನಮ್ಮ ಮನೆಗೆ" ಎಂದು ಕೃಷ್ಣನನ್ನು ಆಹ್ವಾನಿಸಿದರು. ತಾವೇ ಗೋಪಿಯಾಗಿ ಮೈಮೆರೆತು ಹಾಡುಗಳನ್ನು ರಚಿಸಿದರು. ಶ್ರೀಪಾದರಾಜರು ಹರಿದಾಸ ಪರಂಪರೆಗೆ ಶ್ರೀಕಾರ ಬರೆದವರಾದರೆ, ಅವರ ಶಿಷ್ಯರಾದ ವ್ಯಾಸರಾಜರು ಭಕ್ತಿಪಂಥದ ವ್ಯಾಪಕ ಪ್ರಸಾರಕ್ಕೆ ದಾಸಕೂಟವನ್ನೇ ನಿರ್ಮಿಸಿದರು. ಕರ್ನಾಟಕ ಸಂಗೀತ ಪಿತಾಮಹರಾದ ಪುರಂದರದಾಸರು ಹರಿದಾಸ ದೀಕ್ಷೆ ಪಡೆದದ್ದೇ ಶ್ರೀವ್ಯಾಸರಿಂದ. ಅಂದಿನಿಂದ ತಾಳ ತಂಬೂರಿ ಹಿಡಿದು ಪರಮಾತ್ಮನ ಭಕ್ತಿಯ ಮೂಲಕ ಸಮಾಜದಲ್ಲಿ ಸಾತ್ವಿಕ ಶಕ್ತಿಯ ಉತ್ಕರ್ಷಕ್ಕೆ ನಾಂದಿ ಹಾಡಿದರು. ಆಗಿನಿಂದಲೂ ದಾಸ ಕೂಟದ ಕಾರ್ಯ ನಿಶ್ಚಿತ ರೂಪ ಪಡೆದು ಇಂದಿನ ವರೆಗೆ ನಿರಂತರ ನಡೆದುಕೊಂಡು ಬಂದಿದೆ. ಇವರು ವಿಜಯನಗರ ಸಾಮ್ರಾಜ್ಯದ ರಾಜಗುರುಗಳು. ವ್ಯಾಸರಾಜರು ಹಲವಾರು ಶಾಸ್ತ್ರಗ್ರಂಥಗಳನ್ನು ರಚಿಸಿದವರು. ಸಹಸ್ರ-ಸಹಸ್ರ ವಿದ್ಯಾರ್ಥಿಗಳಿದ್ದ ವಿಜಯನಗರದ ಲೋಕಪಾವನ ಮಠದ ಕುಲಪತಿಯಾಗಿದ್ದರು. ಕನ್ನಡದಲ್ಲಿ ಪದಪದ್ಯ, ಕೀರ್ತನೆ, ಸುಳಾದಿ, ಉಗಭೋಗಾದಿಗಳನ್ನು ರಚಿಸಿದರು. ಕನ್ನಡ ಸಾಹಿತ್ಯ ಹಾಗೂ ಸಂಗೀತ ಸಂಸ್ಕೃತಿಯನ್ನು, ಭಕ್ತಿಪಂಥವನ್ನು ಸಮೃದ್ಧಮಾಡಿದರು. ಶ್ರೀವ್ಯಾಸರಾಜರು ಉಡುಪಿಗೆ ಬಂದು ಕೃಷ್ಣನನ್ನು ಕಂಡರು. ಈ ಮುದ್ದುಕೃಷ್ಣನನ್ನು ಕಂಡು ವ್ಯಾಸರಾಯರಿಗೆ ವಾತ್ಸಲ್ಯ ಉಕ್ಕಿ ಹರಿಯಿತು. "ಬಡವರ ಭಾಗ್ಯದ ನಿಧಿಯೇ, ಗೋಕುಲದೊಡೆಯನೇ, ಮಾಣಿಕ್ಯದ ಹರಳೇ, ಕಡು ಮುದ್ಧು ಉಡುಪಿಯ ಬಾಲಕೃಷ್ಣಯ್ಯ ಬಾರಯ್ಯ" ಎಂದು ವಾತ್ಸಲ್ಯದ ಮಳೆಗೆರೆದರು. ಅವರು ಉಡುಪಿಯ ಕೃಷ್ಣನನ್ನು ಗುರುತಿಸಿದ್ದು ಬಡವರ ಭಾಗ್ಯನಿಧಿಯೆಂದು. ವ್ಯಾಸರಾಯರು, ಕೃಷ್ಣಪರಮಾತ್ಮನ ವರ್ಣನೆ ಉಡುಪಿಯ ಕೃಷ್ಣನ ಮೋಹಕವಾದ ಮೋಹನ ಅವತಾರದ ಶ್ರೀಪುರುಷಾಕಾರ ಪುರುಷೋತ್ತಮನನ್ನೆ ವರ್ಣಿಸುತ್ತದೆ. ಇದನ್ನು "ಎಲ್ಲಿ ಮಾಯವಾದನೆ ರಂಗಯ್ಯನು ಎಲ್ಲಿ ಮಾಯವಾದನೆ" ಎಂಬ ಇನ್ನೊಂದು ಹಾಡಿನಲ್ಲಿ ವರ್ಣಿಸುತ್ತಾರೆ. ಶ್ರೀಕೃಷ್ಣ ತಮ್ಮ ವಶವಾದನೆಂದು ಗೋಪಿಯರೆಲ್ಲಾ ಸಂಭ್ರಮಪಟ್ಟು, ಹೆಮ್ಮೆಯಿಂದ, ಅಹಂಕಾರದಿಂದ ಬೀಗುತ್ತಿದ್ದಾಗ ಕಾಣೆಯಾದ ಕೃಷ್ಣನ ಹುಡುಕುತ್ತಾ ದುಃಖತಪ್ತೆಯಾರಾದ ಗೋಪಿಯರು "ಎಲ್ಲಿ ಮಾಯವಾದ ಫುಲ್ಲನಾಭ ಕೃಷ್ಣ, ಚೆಲ್ವ ಕಂಗಳೆಯರು ಹುಡುಕ ಹೋಗುವ ಬನ್ನಿ" ಎಂದು ಅಲೆಯತೊಡಗಿದರು "ನಾವು ಮಂದಗಮನೆಯರೆಲ್ಲಾ ಕೃಷ್ಣನ ಕೂಡಿ ಚೆಂದದಿ ಇದ್ದೆವಲ್ಲ, ಕಂದರ್ಪ ಬಾಧೆಗೆ ಗುರಿಯ ಮಾಡಿದೆವಲ್ಲ, ಮಂದಮತಿ ನಮಗೆ ಬಂದು ಒದಗಿತಲ್ಲ" ಎಂದು ತೊಳಲಾಡುವ ಆ ಸರಸಿಜಾಕ್ಷಿಯರು "ಭಕ್ತವತ್ಸಲ ದೇವನು ತನ್ನವರನ್ನು ಅಕ್ಕರೆಯಲ್ಲಿ ಪೊರೆವನು, ಸಿಕ್ಕದೆಲೆ ಹೋಗನು ಹುಡುಕುತ ಹೋಗುವ, ಅಕ್ಕಯ್ಯ ಬನ್ನೀರೆ ಉಡುಪಿ ಶ್ರೀಕೃಷ್ಣನ" ಎಂದು ವ್ಯಾಸರಾಜರು ವಿರಹವೇದನೆ ಪಡುವ ಗೋಪಿಯರನ್ನು ಚಿತ್ರಿಸುತ್ತಾರೆ. "ಚೆನ್ನಾರೆ ಚೆಲುವ, ಮುಂಗುರುಳು ಮುಂದಲೆಗೆ, ಭಂಗಾರದರಳೆಲೆ, ರಂಗು ಮಾಣಿಕದ ಉಂಗುರವಿಟ್ಟು ಪೊಂಗೆಜ್ಜೆ ತೊಡರು ಅಂದಿಗೆ ಘುಲುಘುಲುರೆನೆ ಅಂಗಳದೊಳಾಡುತ ಈ ಮುದ್ದುಬಾಲ, ಕಟುವಾಯಿ ಬೆಣ್ಣೆ, ಕಟಿಸೂತ್ರ ಪಟವಾಳಿ ಕೌಪೀನ, ಕೊರಳಲಿ ಪದಕ, ಸಟೆಯಲ್ಲಿ ಬ್ರಹ್ಮಾಂಡ, ಉದರದಲಿ ಬಿಟ್ಟು ಮಿಟಮಿಟನೆ ನೋಡುವನು ಹಿಂದಾಗಿ ನೋಡಲು ಅಂತರಂಗದ ಸ್ವಾಮಿ ಪ್ರತಿಯೊಳು ಅಂಬುಧಿ ತೀರದ ಉಡುಪಿಯ ಕೃಷ್ಣ" ಎಂದು ತನ್ನನ್ನೇ ತಾನು ಮರೆತು ಶ್ರೀಕೃಷ್ಣನ ಸೊಬಗನ್ನು ಬಣ್ಣಿಸುತ್ತಾರೆ ವ್ಯಾಸರಾಯರು. "ಪೊಗಳಲೆನ್ನಳವಲ್ಲ, ಪೊಸಬಗೆಯ ಮಹಿಮೆಗಳ, ಅಘಹರನ ಅಗಣಿತ ಗುಣಗಣಗಳ, ನಿಗಮನಿಕರಕೆ ಮೈಯಗೊಡದ ಉಡುಪಿ ಶ್ರೀಕೃಷ್ಣನ ಸೊಗುಮಿಗೆಯ ಉನ್ನತದ ವೈಯಾರಗಳನು" ಹೀಗೆ ಕೃಷ್ಣನ ಮಹಿಮೆಯನ್ನು ಎಷ್ಟು ಹೊಗಳಿದರೂ ವ್ಯಾಸರಾಯರಿಗೆ ತೃಪ್ತಿಯಿಲ್ಲಾ.