ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ವಾದಿರಾಜರ ಕೃಷ್ಣ ಪ್ರೇಮ

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ವಾದಿರಾಜರ ಕೃಷ್ಣ ಪ್ರೇಮ

ಹುಟ್ಟಿದ ತಕ್ಷಣ ಸಂನ್ಯಾಸ ಧರ್ಮದ ಆಶ್ರಮಕ್ಕೆ ಬಂದ ವಾದಿರಾಜರು ನೂರಿಪ್ಪತ್ತು ವರುಷಗಳ ಕಾಲ ಬರುಕಿದರು. ಇವರು ಉಡುಪಿಯ ಕೃಷ್ಣನ ಪರ್ಯಾಯ ಅವಧಿಯನ್ನು ಎರಡು ತಿಂಗಳಿಂದ ಎರಡು ವರುಷಗಳಿಗೆ ವಿಸ್ತರಿಸಿದವರು. ಅಂದಿನಿಂದ ಅರಸುಗಳಿಂದ ಕೃಷ್ಣಮಠಕ್ಕೆ ಉತ್ತಮ ಭೂಸ್ಥಿತಿಗಳ ವ್ಯವಸ್ಥೆ ಮಾಡಿಸಿದವರು. "ಲಕುಮಿನಾರಾಯಣ ಜಯ ಲಕುಮಿನಾರಾಯಣ" ಎಂಬ ಹಾಡನ್ನು ಎಲ್ಲಾ ಯತಿಗಳು ಪ್ರತಿ ರಾತ್ರಿ ಪೂಜಾಕಾಲದಲ್ಲಿ ಭಜನರೂಪದಲ್ಲಿ ತಾಳ ಹಾಕಿ ನರ್ತಿಸುತ್ತಾ, ಹಾಡುತ್ತಾ ಸೇವೆ ಮಾಡುವ ಸಂಪ್ರದಾಯವನ್ನು ತಂದರು. "ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯ ಮಂಗಳ ಮೂರ್ತಿಯ, ಕಂಡು ಬದುಕಿದ ಇಂದು ನಾನು ಕರುಣಿಸೋ ಎನ್ನೊಡೆಯನೇ, ಇನ್ನು ಎನ್ನ ಬಂಧ ತೀರಿತು, ಇನ್ನು ಕ್ಲೇಶವು ಹೋಯಿತು" ಎಂದು ಆನಂದಲಹರಿಯನ್ನೇ ಹರಿಸಿದ್ದಾರೆ. ಅವರ ಸಾಧನ ಕ್ಷೇತ್ರ ಸೋದೆಯಾದರೆ, ಕಾರ್ಯಕ್ಷೇತ್ರ ಉಡುಪಿ. ವಾದಿರಾಜರು ಐದು (೫) ಸಲ ಪರ್ಯಾಯವನ್ನು ಮಾಡಿದರೂ ದಣಿಯದೇ ಕೃಷ್ಣನ ಸೇವೆಮಾಡುವ ಭಾಗ್ಯವನ್ನು ಕಂಡವರು. ಒಂಬತ್ತು ಗೂಡಿನ ಕಿಟಿಕಿಯಲ್ಲಿ ಭಕ್ತರು ಕೃಷ್ನನನ್ನು ಕಂಡು ಭಕ್ತಿಪರವಶರಾಗಿ ಆನಂದದ ಕಣ್ಣೀರು ಹಾಕುವುದನ್ನು ಕಂಡು ತನಗೂ ಅಲ್ಲಿಂದ ಕೃಷ್ಣನನ್ನು ಕಾಣುವ ಆಸೆಯಾಗಿ ನೋಡಿ " ನೋಡಿದೆ ಶ್ರೀಕೃಷ್ಣನ ನೋಡಿದೆ ಒಂಬತ್ತು ಗೂಡಿನ ಕಿಟಿಕಿಯಲ್ಲಿ, ಅಲ್ಲಿ ನೆರೆದ ಮಂದಿಯೊಡನೆ ನಾನೂ ನಿಂತು ಗಾಡಿಕಾರ ಕೃಷ್ಣನನ್ನು ನೋಡಿದೆ. ನಾರಿ, ಪುರುಷರೆಲ್ಲ ಒಂದುಗೂಡಿ ಮುಂದೆ ದಾರಿ ಬಿಡದೆ ಮೈ-ಕೈ ಪುಡಿಮಾಡಿಕೊಂಡು ಅವನನ್ನು ಹಾಡಿ, ಕಾಡಿ, ಬೇಡುತ್ತಿದ್ದಾಗ ಸುತ್ತ ಸೇರಿದ ಆ ಜನರ ಮಧ್ಯದಲ್ಲಿ ಬಾರುಮೌಕ್ತಿಕ ಮಣಿಹಾರದಿಂದ ಶೃಂಗಾರವಾಗಿ ಕಾಣುವ ಕೃಷ್ಣನನ್ನು ಕಂಡೆ. ಮೈಯೆಲ್ಲಾ ದಿವ್ಯಾಭರಣ, ಕಣ್ಣುಗಳಲ್ಲಿ ರವಿಕಿರಣ, ಋಷಿ,-ಮುನಿಗಳು ವಂದಿಸುವ ಚರಣ, ನೆನೆವರಿಗೆ ತೋರುವುದು ಕರುಣ, ಹೀಂಗದೆ ಪೊರೆವ ಈ ರಂಗನ ಉತ್ಸವಕೆಂದು ಮಂಗಳಾರತಿ ತಂದು ಸಂಗಡ ಹೊರಟು ನೋಡಿದೆ. ಆಗ ಅವನು ಭರದಿಂದ ಪಲ್ಲಕಿ ಏರಿದ. ಸರೋವರಕ್ಕೆ ಬಂದ,ಸುತ್ತ ದೀಪಗಳು ಬೆಳಗಿದವು, ಜಲಕ್ರೀಡೆಯಾಡಿದ, ಬಳಿಕ ಅಲ್ಲಿಂದ ಹೊರ ಹೊರಟು ಬಂದು ರಥವೇರಿ ರಾಜಬೀದಿಯಲ್ಲಿ ಮೆರೆದು ಬಂದ." ವಾದಿರಾಜರು ಕೃಷ್ಣನನ್ನು ಬಾರೋ ಎಂದು ಪ್ರೀತಿಯಿಂದ ಕರೆಯುವ ವೈಖರಿಯೇ ಚಂದ. "ಹೃದ್ಯ ಬಾರೋ, ಅನವದ್ಯ ಬಾರೋ,ಮಧ್ವಮುನಿಕರಕಮಲಪೂಜಿತ ಪಾದಪದ್ಮ ಬಾರೋ.....ಸರ್ವಕರ್ತನೇ ಬಾರೋ, ಬೇಗ ಬಾರೋ ಈ ವಾದಿರಾಜ ಯತಿಯ ಮನಮಂದಿರಕೆ ನೀ ಬಾರೋ" "ಆವ ಕುಲವೋ ರಂಗ" ಎಂಬ ಇನ್ನೊಂದು ಹಾಡಿನಲ್ಲಿ ವಾದಿರಾಜರು ಈ ಕೃಷ್ಣ ಯಾವ ಕುಲದವನೆಂದು ನಮಗೆ ಗೊತ್ತಿಲ್ಲಾ ಎಂದು ಹೇಳುತ್ತಲೇ " ನಾವರಿಯಲಾರೆವು ಗೋವ ಕಾವ ಗೊಲ್ಲನಂತೆ,ಆದರೆ ತಾನೇ ದೇವಲೋಕಕ್ಕೆ ಹೋಗಿ, ದೇವತೆಗಳನ್ನು ಮಣಿಸಿ, ಪಾರಿಜಾತ ವೃಕ್ಷವನ್ನು ತಂದು ಸತ್ಯಭಾಮೆಗೆ ನೀಡಿದನಂತೆ, ಕರಡಿಯ ಮಗಳು ಅವನ ಮಡದಿಯಂತೆ, ಸಾಗರನ ಮಗಳಾದ ಲಕ್ಷ್ಮೀಗೆ ಅವನು ರಮಣನಂತೆ, ಬಲಿಯಲ್ಲಿ ಭೂಮಿ ದಾನ ಬೇಡಿದ ಅವನು ಈರೇಳು ಲೋಕದ ಒಡೆಯನಂತೆ, ಹಡಗಿನಿಂದ ಬಂದವನಂತೆ, ಪಡುಗಡಲ ತೀರದಲಿ ಮಧ್ವರಿಗೊಲಿದು ನಿಂತ ಒಡೆಯನಂತೆ." ಎಂದು ಉಡುಪಿಯ ಕೃಷ್ಣನ ಲೀಲಾವೈಭವವನ್ನು ಬಣ್ಣಿಸುತ್ತಾರೆ. ಅಭಕ್ತರಾದ ಕಳ್ಳರೇನಾದರೂ ಉಡುಪಿಯ ಜನರಿಗೆ ದುಃಖ ನೀಡಿದರೆ ಹಯವದನನಾದ ಕೃಷ್ಣ ಅವರನ್ನು ಶೂಲಕ್ಕೇರಿಸದೇ ಬಿಡುವನೇ ಎಂದು ಹೇಳುತ್ತಾ ಉಡುಪಿಯ ಕೃಷ್ಣ ಉಡುಪಿಯ ಸಜ್ಜನರಿಗೆ ಸದಾ ರಕ್ಷಾಶಕ್ತಿಯಾಗಿ ಪೊರೆಯುತ್ತಾನೆ ಎಂದು ಹಾಡಿದ್ದಾರೆ ವಾದಿರಾಜರು. ----೦೦೦೦೦-----