ದಾಸರದಾಸರಾದ ಕನಕದಾಸರು

ದಾಸರದಾಸರಾದ ಕನಕದಾಸರು

ದಾಸರದಾಸರಾದ ಕನಕದಾಸರು ಉಡುಪಿಯಲ್ಲಿ ಕನಕದಾಸರಿಂದ ಆದ ಚಮತ್ಕಾರ ಎಲ್ಲರೂ ತಿಳಿದದ್ದೇ. ಅಂತಹಾ ಮಹಾನ್ ಭಕ್ತ ಬೇಲೂರಿನಲ್ಲಿ ದಾಸರ ದಾಸರಾಗಿ ಊಳಿಗ ಮಾಡಿದ್ದು, ಅದನ್ನು ಮಹಾಪುಣ್ಯದ ಕೆಲಸ ಎಂದು ಅವರು ಭಾವಿಸಿದ್ದು ಅವರ ವೈಶಿಷ್ಟ್ಯ. ಬೇಲೂರಿನಲ್ಲಿ ವೈಕುಂಠದಾಸರೆಂಬ ಹರಿಭಕ್ತರಿದ್ದರು. ಕನಕದಾಸರ ದೀಕ್ಷಾ ಗುರುಗಳಾದ ತಿರುಮಲೆ ತಾತಾಚಾರ್ಯರೇ ಇವರಿಗೂ ದೀಕ್ಷೆ ಕೊಟ್ಟವರೆಂದು ಹೇಳುತ್ತಾರೆ. ಇವರು ಬೇಲೂರು ಬಿಟ್ಟು ಹೊರಗೆಲ್ಲೂ ಹೋದವರಲ್ಲ. ಆದರೂ ಅವರ ಖ್ಯಾತಿಯಂತೂ ಎಲ್ಲಾಕಡೆ ಹರಡಿತ್ತು. ಕನಕದಾಸರು ವೈಕುಂಠದಾಸರ ಹಿರಿಮೆಯನ್ನು ಮೊದಲೇ ಕೇಳಿದ್ದರು. ಅವರನ್ನು ಕಾಣಲೆಂದು ಬೇಲೂರಿಗೆ ಹೋದರು. ವೈಕುಂಠದಾಸರೂ ಕನಕದಾಸರ ವಿಚಾರವನ್ನು ತಿಳಿದವರಾಗಿದ್ದರು. ಪರಸ್ಪರ ಗೌರವ ವಿಶ್ವಾಸಗಳು ಬೆಳೆದಿದ್ದವು, ಆದರೆ ಪರಸ್ಪರ ಭೆಟ್ಟಿಯಾಗಿರಲಿಲ್ಲ ಅಷ್ಟೇ. ಕನಕದಾಸರು ಬೇಲೂರಿಗೆ ಬಂದು ವೈಕುಂಠದಾಸರ ಮನೆಯನ್ನು ಹುಡುಕಿಕೊಂಡು ಹೋಗಿ, ಅವರಲ್ಲಿ ಊಳಿಗಕ್ಕೆ ಸೇರಿದರು. ತಾವು ಇಂಥವರು ಎಂದು ವೈಕುಂಠದಾಸರಿಗೆ ತಿಳಿಯಪಡಿಸದೇ ಅವರು ಹೇಳಿದ ಕೆಲಸಗಳನ್ನೆಲ್ಲಾ ನಿಷ್ಠೆಯಿಂದ, ಭಕ್ತಿಯಿಂದ, ಬೇಸರಪಡದೇ ಮಾಡುತ್ತಿದ್ದರು. ಆದರೆ ಒಂದು ದಿನ ವೈಕುಂಠದಾಸರಿಗೆ ತನ್ನಲ್ಲಿ ಊಳಿಗ ಮಾಡುತ್ತಿರುವವರು ಕನಕದಾಸರು ಎಂಬ ವಿಚಾರ ತಿಳಿದು ಹೋಯಿತು. ಆಗ ವೈಕುಂಠದಾಸರಿಗೆ ಆದ ಸಂಕಟ ಅಷ್ಟಿಷ್ಟಲ್ಲ. ಇಷ್ಟು ದೊಡ್ಡ ಹರಿದಾಸರು ತನ್ನ ಮನೆಯಲ್ಲಿ ಇದ್ದರೂ ತಾನು ಗುರುತಿಸಿ ಗೌರವಿಸಲಾರದೇ ಹೋದೆನೇ ಎಂದು ಮರುಗಿದರು. ಕನಕದಾಸರ ಕಾಲು ಹಿಡಿದು ತಪ್ಪನ್ನು ಮನ್ನಿಸಬೇಕೆಂದು ಪರಿಪರಿಯಾಗಿ ಬೇಡಿಕೊಂಡರು. ಆಗ ಕನಕದಾಸರು, “ಇದರಲ್ಲಿ ತಮ್ಮ ತಪ್ಪೇನಿದೆ? ನಾನು ಯಾರೆಂದು ನಿಮಗೆ ಹೇಳದೇ ಊಳಿಗಕ್ಕೆ ಬಂದು ಸೇರಿದ್ದು ಅಲ್ಲವೇ? ತಮಗೆ ಹೇಗೆ ತಿಳಿಯಬೇಕು ನಾನು ಕನಕದಾಸನೆಂದು? ಹೀಗಿರುವಾಗ ಚಿಂತೆ ಬಿಡಿ. ನನಗೆ ತಮ್ಮಂತಹಾ ಜ್ಞಾನಿಗಳ ಸೇವೆ ಮಾಡಬೇಕೆಂದು ಬಹಳ ದಿನಗಳಿಂದ ಆಸೆಯಿತ್ತು. ನನ್ನ ಪರಿಚಯವನ್ನು ಮೊದಲೇ ತಿಳಿಸಿಬಿಟ್ಟರೆ ಈ ಅವಕಾಶ ತಪ್ಪಿ ಹೋಗುವುದಲ್ಲ ಎಂದು ತಿಳಿದಿದ್ದರಿಂದಲೇ ನಾನು ಯಾರೆಂದು ತಮಗೆ ತಿಳಿಯಗೊಡಲಿಲ್ಲ. ಹರಿದಾಸರ ಸೇವೆ ಮಾಡಿದರೆ ಹರಿಗೆ ಪ್ರಿಯವಾಗುತ್ತದೆ.” ಎಂದು ಹೇಳಿ ವೈಕುಂಠದಾಸರನ್ನು ಸಂತೈಸಿ ಒಂದು ಕೀರ್ತನೆಯನ್ನು ರಚಿಸಿದರು. “ಬಂಟನಾಗಿ ಬಾಗಿಲಕಾಯ್ವೆ ಹರಿಯೆ ವೈಕುಂಠದಾಸೋತ್ತಮದಾಸರ ಮನೆಯ ಹೊರಸುತ್ತ ಪ್ರಾಕಾರ ಸುತ್ತಿ ಬರುವೆ ಬರುವ ಹೋಗುವರ ವಿಚಾರಿಸಿ ಬಿಡುವೆ ಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಹರಿಯ ಸಮ್ಮುಖದ ಓಲಗದೊಳಿರುವೆ ಎಂಜಲ ಹರಿವಾಣಂಗಳ ಬೆಳಗುವೆ ಕಂಜನಾಭನ ಪಾದಂಗಳ ತೊಳೆವೆ ರಂಜಿಪ ಕುಸುಮ ಮಾಲಿಕೆಗಳ ತರುವೆ ಸಂಜೆಗೆ ಪಂಜಿನ ದಾಸನಾಗಿರುವೆ ಮೀಸಲ ಊಳಿಗ ನಾ ಮಾಡಿಕೊಂಡಿರುವೆ ಶೇಷ ಪ್ರಸಾದವ ಉಂಡುಕೊಂಡಿರುವೆ ಶೇಷಾಚಲ ಕಾಗಿನೆಲೆಯಾದಿ ಕೇಶವನ ದಾಸರ ದಾಸರ ದಾಸರ ಮನೆಯ.” ಅಲ್ಲಿಂದ ಮುಂದೆ ಕನಕದಾಸರು ವೈಕುಂಠದಾಸರ ಮನೆಯಲ್ಲೇ ಉಳಿದು ‘ಹರಿಭಕ್ಕ್ತಿಸಾರ’ ಎನ್ನುವ ಕಾವ್ಯ ಗ್ರಂಥವನ್ನು ರಚಿಸಿದರು. ಇದನ್ನು ಬೇಲೂರಿನ ಚೆನ್ನಕೇಶವ ಸ್ವಾಮಿಗೆ (ಸುರಪುರ ಚೆನ್ನಿಗರಾಯನಿಗೆ) ಅರ್ಪಿಸಿದರು. ‘ಕೇಶವನೊಲುಮೆಯು ಆಗುವತನಕ’ ಎಂಬ ಪ್ರಸಿದ್ಧ ದೇವರ ನಾಮವನ್ನು ಅಲ್ಲೇ ರಚಿಸಿ ಅದರ ಕೊನೆಯಲ್ಲಿ ‘ವರವೇಲಾಪುರದಾದಿ ಕೇಶವನ’ ಸ್ಮರಣೆ ಮಾಡಿದ್ದಾರೆ.‘ನಳಚರಿತ್ರೆ’ ಭಾಮಿನಿ ಷಟ್ಪದಿಯಲ್ಲಿ ರಚಿಸಿ ಅದನ್ನೂ ಸಹಾ ‘ವರಪುರದ ಚೆನ್ನಿಗರಾಯನಿಗೆ’ ಅಂಕಿತ ಮಾಡಿದ್ದಾರೆ. ವೈಕುಂಠದಾಸರ ಸಹವಾಸ ಇವಕ್ಕೆಲ್ಲಾ ಕನಕದಾಸರಿಗೆ ಸ್ಪೂರ್ತಿಯಾಯಿತು. ಆಧಾರ : ಸಾ.ಕೃ.ರಾಮಚಂದ್ರರಾವ್ ಅವರ ದಾಸ ಸಾಹಿತ್ಯ ಮತ್ತು ಸಂಸ್ಕೃತಿ • ಪ್ರಬಂಧ
ಬಗೆ