ಹಸಿವೆಯಾಗುತಿದೆ ಅಮ್ಮ ಕೇಳೆ

ಹಸಿವೆಯಾಗುತಿದೆ ಅಮ್ಮ ಕೇಳೆ

( ರಾಗ ಕಾಪಿ ಏಕತಾಳ) ಹಸಿವೆಯಾಗುತಿದೆ ಅಮ್ಮ ಕೇಳೆ ಹಸನಾದ ಅವಲಕ್ಕಿ ಬೆಲ್ಲ ಕಲಸಿ ಕೊಡೆ ||ಪ|| ಬಿಸಿ ಬಿಸಿ ಅನ್ನ ಕೈ ಸುಡುತಿದೆ ಬದಿಯಲ್ಲಿ ಕೂಡೆ ||ಅ|| ಖಾರ ಸಾರು ಮಾಡಬೇಡ ಉಣ್ಣಬಾರೆನೆ, ಎನಗೆ ಸೀಸಾರು ಮಾಡಿದರೆ ಬೇಗನುಂಬುವೆ || ತೋಡ ತುಪ್ಪ ಹಾಕಿದರೆ ನೆಲಕೆ ಒತ್ತುವೆ, ಎನಗೆ ಗಟ್ಟಿ ತುಪ್ಪ ಹಾಕಿದರೆ ಬೇಗ ನುಂಗುವೆ || ನೀರು ಮೊಸರು ಹಾಕಿದರೆ ನೆಲಕೆ ಎತ್ತುವೆ, ಎನಗೆ ಗಟ್ಟಿ ಮೊಸರು ಹಾಕಿದರೆ ತಟ್ಟನುಂಗುವೆ || ತಟ್ಟನೇಳೊ ಕೃಷ್ಣರಾಯ ಬಟ್ಟಲು ತೊಳೆದೇನು, ನಿನಗೆ ಉಕ್ಕುವ ಹಾಲಿನ ಕೆನೆಯ ಕೈಯಲಿ ಕೊಟ್ಟು ಕಳುಹುವೆನು || ಕಂದರೆಲ್ಲ ಕರೆಯ ಬಂದರಮ್ಮ ಕೇಳೆ, ಬಾಳೆ- ಹಣ್ಣು ಬೆಲ್ಲ ಚೂರು ಕೈಯಲ್ಲಿ ಕೊಡೆ || ಕಂದರೆಲ್ಲ ಕರೆಯ ಬಂದರು ತಾಯಿ ಕೇಳೆ, ಸಕ್ಕರೆ ಕೊಬ್ಬರಿಯ ಕುಟ್ಟಿ ಸೆರಗಿಲಿ ಹಾಕೆ || ವೃಂದಾವನದೊಳಗೆ ಬಂದು ಅಮ್ಮ ಕೇಳೆ, ಬಲು ಚಂದದ ಗೊಂಬೆಯ ಹೂಡಿ ಕಟ್ಟಿ ಕೊಡೆ || ಒಳಗೆ ಆಡು ಒಳಗೆ ಆಡು ಬಾರೋ ರಂಗ, ಅಲ್ಲಿ ಹೊರಗೆ ಬೂಚಿಮುಖದ ಹುಲಿ ತಿರುಗುತಿದೆ || ಓಡಿ ಬಾರೊ ಓಡಿ ಬಾರೊ ಪುರಂದರವಿಠಲ, ಅಲ್ಲಿ ಆಡಿನ ಮುಖದ ಹುಲಿ ತಿರುಗುತಿದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು