ಹರಿ ಸರ್ವೋತ್ತಮನೆಂದು

ಹರಿ ಸರ್ವೋತ್ತಮನೆಂದು

(ರಾಗ ಸೌರಾಷ್ಟ್ರ. ಅಟ ತಾಳ ) ಹರಿ ಸರ್ವೋತ್ತಮನೆಂದು ಸ್ಮರಿಸದ ಜನರ ಸಂಗ ಬೇಡ ||ಪ|| ಸಿರಿ ವಾಯುಮತ ಪೊಂದಿ ಹರುಷ ಪಡದವರ ಸಂಗ ಬೇಡ ||ಅ.ಪ|| ಮುಂದೆ ಭಲಾ ಎಂದು ಹಿಂದಾಡಿಕೊಂಬರ ಸಂಗ ಬೇಡ ಎಂದೆಂದಿಗು ಪರನಿಂದೆ ಮಾಡುವ ಪಾಪಿ ಸಂಗ ಬೇಡ ತಂದೆ ತಾಯಿಗೆ ಮನ ಬಂದಂತೆ ನುಡಿವರ ಸಂಗ ಬೇಡ ಇಂದುಮುಖಿಯರ ಮಾತಿನಂದದಿ ಕುಣಿವರ ಸಂಗ ಬೇಡ ತುದಿನಾಲಿಗೆ ಬೆಲ್ಲ ಎದೆ ವಿಷವುಳ್ಳರ ಸಂಗ ಬೇಡ ಬೆದರಿಕೆ ಮಾತುಗಳೊದರುವ ಜನರ ಸಂಗ ಬೇಡ ಮದುವೆಯ ಕೆಡಿಸಿ ಮುದದಿ ನಲಿಯುವರ ಸಂಗ ಬೇಡ ಉದರಕೋಸುಗ ವಿಧಿಕರ್ಮ ತ್ಯಜಿಪರ ಸಂಗ ಬೇಡ ತುಂಟತನವ ಮಾಡಿ ಕುಟಿಲವ ನುಡಿವರ ಸಂಗ ಬೇಡ ಬಂಟರಾಗಿ ದನಿಯ ಗಂಟಲ ಮುರಿವರ ಸಂಗ ಬೇಡ ಉಂಟು ತಮಗೆಂದು ಬಡವರ ಬೈವರ ಸಂಗ ಬೇಡ ಒಂಟ್ಯಾಗಿ ಪುರಂದರ ವಿಟ್ಟಲೆನೆನ್ನದವರ ಸಂಗ ಬೇಡ
ದಾಸ ಸಾಹಿತ್ಯ ಪ್ರಕಾರ
ಬರೆದವರು