ಶ್ರೀ ತುಳಸಿಯಾ ಸೇವಿಸಿ

ಶ್ರೀ ತುಳಸಿಯಾ ಸೇವಿಸಿ

ತುಳಸಿಯ ಮಹಿಮೆಯನ್ನು ಕೊಂಡಾಡುವ ಈ ಹಾಡನ್ನು ರಾಗಗಳ ಮಾಲಿಕೆಯಿಂದ ಪೋಣಿಸಿ ಹಲವಾರು ಶ್ರೋತೃಗಳನ್ನು ಪ್ರೀತಗೊಳಿಸಿ ’ತುಳಸೀ ಕೃಷ್ಣಮೂರ್ತಿಗಳು’ ಎಂದೇ ಪ್ರಖ್ಯಾತರಾದ ಶ್ರೀ ಬಿ.ಎಸ್.ಕೃಷ್ಣಮೂರ್ತಿಗಳಿಗೆ ನನ್ನ ಅನಂತ ವಂದನೆಗಳು. ಸ್ತೋತ್ರ: ಉದಯರಾಗ ರಾಗ: ಭೂಪಾಳಿ ---------------- ಶ್ರೀ ತುಳಸಿಯಾ ಸೇವಿಸಿ ||ಪ|| ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆಯೆಂಬನಿತರೊಳು ಪಾತಕ ಪರಿಹರಿಸಿ ಪುನೀತರನು ಮಾಡುವಳು ಯಾತಕನುಮಾನವಯ್ಯಾ ||ಅ||ಪ|| ಸುಧೆಗಡಲ ಮಧಿಸುವ ಸಮಯದಲಿ ವೈದ್ಯನಾಗಿ ಪದುಮನಾಭನು ತಾನು ಉದುಭವಿಸಿ ಬರಲ೦ದು ಉದುರಿದವು ಕಣ್ಣಿಂದ ಉದಕ ಉತ್ಸಾಹದಿಂದಲದೆ ತುಳಸಿನಾಮವಾಗೇ || ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು ಒದಗಿ ಸುಜನರು ತಮ್ಮ ಸದನದಲಿ ನಿತ್ಯ ಸ ತ್ಪದವಿಗೆ ಸಿದ್ದವೆಂದು ಮುದದಿಂದ ತಿಳಿದು ವೃಂದಾವನ ರಚಿಸಿದರಯ್ಯಾ ||೧|| ರಾಗ: ಮಲಯಮಾರುತ -------------------- ಮೂಲದಲಿ ಸರ್ವತೀರ್ಥಗಳುಂಟು ತನ್ಮಧ್ಯೆ ಕಾಲ ಮೀರದೆ ಸರ್ವನದನದಿಗಳಮರಗಣ ಮೇಲೆ ದಳ ಒಂದರಲಿ ಒಂದೊಂದು ಮೂರುತಿಯು ವಾಲಯವಾಗಿಪ್ಪುದು || ಮೂರ್ಲೋಕಗಳ ಧರ್ಮವ್ರತಕೆ ಮಿಗಿಲೆನಿಸುವುದು ನೀಲೆಮೇಘಶ್ಯಾಮ ಗರ್ಪಿಸಿದ ತುಳಸಿ ನಿ ರ್ಮಾಲ್ಯವನು ಸತತ ಕರ್ಣದಲಿ ಧರಿಸಿದ ಮನುಜ ಕಾಲನಾಳಿಗೆ ಶೂಲನೋ ||೨|| ರಾಗ: ರಂಜಿನಿ -------------- ಉದಯದೊಳಗೆದ್ದು ನೀರೆರೆದು ಮಜ್ಜನಗೈದು ತುದಿಬೆರಳಿನಿಂದ ಮೃತ್ತಿಕೆ ಫಣೆಯೊಳಿಟ್ಟು ಮುದದಿಂದಲೊಂದು ಪ್ರದಕ್ಷಿಣೆ ನಮಸ್ಕಾರ ತದನಂತರದಲಿ ಭಜನೇ || ವದನದೊಳುಗೈಯೆ ಧರೆಯಮೇಲಿದ್ದ ಸರ್ವ ನದನದಿಗಳಿಗೆ ನೂರ್ಮಡಿಯಾತ್ರೆ ಮಾಡಿದ ಫಲ ಒದಗುವುದು ಹಿಂದಣಾನಂತ ಜನ್ಮಗಳಘವ ತುದಿಮೊದಲು ದಹಿಪುದಯ್ಯಾ ||೩|| ರಾಗ: ಬಿಲಹರಿ --------------- ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ ಆವವನ ಮನೆಯಲ್ಲಿ ಹರಿದಾಸರಾ ಕೂಟ ಆವವನ ಭುಜದಲ್ಲಿ ತಪ್ತ ಮುದ್ರಾಂಕಿತವು ಪಾವಮಾನಿಯ ಮತದೊಳು ಆವವನು ಕಾಲತ್ರಯ ಕಳೆವನಾವಲ್ಲಿ ಶ್ರೀ ವಾಸುದೇವ ಮುನಿದೇವಾದಿ ಗಣಸಹಿತ ಕಾವುತ್ತಲಿಪ್ಪ ಬಲಿಗೊಲಿದಂತೆ ತೊಲಗದೆಲೆ ಭಾವಿಸಿರಿ ಭಾವಜ್ಜ್ನರೂ ||೪|| ರಾಗ: ಅಠ್ಠಾಣ: --------------- ಕಂಡರೆ ದುರಿತಕ್ಕೆ ಕೆಂಡವನು ಬೀರುವುದು ಕೊಂಡಾಡಿದರೆ ಪುಣ್ಯವಪರಿಮಿತ ಉಂಟು ಮೈ ದಿಂಡುಗೆಡಹಿದರೆ ಪುನರಪಿಜನನವಿಲ್ಲ ಸಲೆ ದಂಡವಿಟ್ಟವ ಮುಕ್ತನೋ || ಚಂಡಾಲಕೇರಿಯೊಳು ಇರಲು ಹೀನಯವಲ್ಲ ಪಾಂಡುರಂಗಕ್ಷೇತ್ರ ಸರಿಮಿಗಿಲು ಎನಿಸುವುದು ತಂಡತಂಡದ ಕುಲಕೆ ಅವರವರ ಯೋಗ್ಯಫಲ ಕಂಡವರಿಗುಂಟೆ ಅಯ್ಯಾ ||೫|| ರಾಗ: ಮೋಹನ: -------------- ಚಿತ್ತಶುದ್ದನ ಆಗಿ ಮುಂಝಾನೆಯೊಳು ತುಳಸಿ ಸ್ತೋತ್ರವನು ಮಾಡುತ್ತ ದಿವ್ಯವಾಗಿಹ ತ್ರಿದಳ ಪ್ರತ್ಯೇಕ ಪಾತ್ರೆಯಲಿ ತೆಗೆದು ಶೋಧಿಸಿ ತುಂಬಿ ವಿತ್ತಾದಿಯಲಿತಾರದೇ || ಮತ್ತೆ ವಸ್ತ್ರದಿ ಹಸ್ತಶಿಲೆ ಆರ್ಕಏರಂಡ ಪತ್ರದಲಿ ತಾರದೆಲೆ ಭೂಮಿಯೊಳಗಿಡದೆ ಪೂ ರ್ವೋತ್ತರಭಿಮುಖನಾಗಿ ಭಕ್ತಿಯಿಂ ತರಬೇಕು ಹೊತ್ತು ಮೀರಿಸಲಾಗದು ||೬|| ರಾಗ: ಷಣ್ಮುಖಪ್ರಿಯ: ---------------------- ಕವಿ ಮಂಗಳವಾರ ವೈಧೃತಿ ವೃತೀಪಾತ ರವಿಶಶಿಯ ಸಂಗಮ ಪರ್ವಣಿ ಪುಣ್ಯಕಾಲ ದಿವಸ ದ್ವಾದಶಿ ಶ್ರೇಷ್ಟ ಉಪರಾಗ ಪಿತೃಶ್ರಾದ್ದ ಇವುಗಳಲಿ ತೆಗೆಯದಿರೀ || ನವವಸನಪೊದ್ದು ಊಟವ ಮಾಡಿ ತಾಂಬೂಲ ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ ಸುವುದುಚಿತವಲ್ಲೆಂದು ತಿಳಿದು ಕೊಂಡಾಡುತಿರಿ ದಿವಸ ದಿವಸಗೊಳೊಳಯ್ಯಾ ||೭|| ರಾಗ: ಸಿಂಧುಭೈರವಿ -------------------- ದಳವಿದ್ದರೇ ಒಳಿತು ಇಲ್ಲದಿದ್ದರೆ ಕಾಷ್ಟ ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು ತುಳಸಿ ನಿರ್ಮಾಲ್ಯವಾದರೂ ತ್ರಿವಾರದಲಿ ತೊಳೆದು ತೊಳೆದೇರಿಸಲಿ ಬಹುದೂ || ತುಳಸಿ ಒಣಗಿದ್ದರೂ ಲೇಶದೋಶಗಳಲ್ಲ ತುಳಸಿ ವಿರಹಿತ ಪೂಜೆಯದು ಸಲ್ಲದೋ ತುಳಸೀ ತುಳಸೀ ಎಂದು ಸ್ಮರಣೆಯಾದರೂ ಮಾಡಿ ಜಲಜಾಕ್ಷನರ್ಚಿಸಿರಯ್ಯಾ ||೮|| ರಾಗ: ಕಾನಡ ------------- ತುಳಸಿ ಇಲ್ಲದ ಸದನ ಹೊಲೆಮಾದಿಗರ ಸದನ ತುಳಸಿ ಇಲ್ಲದ ಬೀದಿ ನರಕಕೆಳೆಸುವ ಹಾದಿ ತುಳಸಿ ಇಲ್ಲದ ತೀರ್ಥವೆಂದಿಗಿದ್ದರೂ ವ್ಯರ್ಥ ತುಳಸಿ ಬಲು ಪ್ರಾಧಾನ್ಯವೋ || ತುಳಸಿ ಮಿಶ್ರಿತವಾದ ನೈವೇದ್ಯಗತಿ ಸಾಧ್ಯ ತುಳಸಿ ಧರಿಸಿದ ದೇಹ ಪರಮ ಸಾರ್ಥಕವೈಯ್ಯ ತುಳಸಿದಳ ಹರಿಗೆ ಅರ್ಪಿಸಿದವನ ಪುಣ್ಯಕ್ಕೆ ನೆಲೆಯ ನಾಗಾಣೆನಯ್ಯಾ ||೯|| ರಾಗ: ಸುರುಟಿ ------------- ಶಿವನ ಸತಿ ಪ್ರಹ್ಲಾದ ನಾರದ ವಿಭೀಷಣನು ಧ್ರುವ ಅಂಬರೀಶ ಶಶಿಬಿಂದು ರುಕುಮಾಂಗದನು ಇವರೆ ಮೊದಲಾದವರು ಭಕುತಿ ಪೂರ್ವಕದಿಂದ ವಿವರವನು ತಿಳಿದರ್ಚಿಸೀ || ತವಕದಿಂ ತಂತಮ್ಮ ಘನಪದವನೈದಿದರು ಭುವನದೊಳಗುಳ್ಳ ನಿರ್ಮಲಜನರು ಭಜಿಸಿದರು ಜವಭಟರನೋಡಿಸೀ ಜಡದೇಹವನು ನೀಗಿ ಭವ ದೂರರಾದರಯ್ಯಾ ||೧೦|| ರಾಗ: ಮಧ್ಯಮಾವತಿ: --------------------- ಉದಯಕಾಲದೊಳೆದ್ದು ಆವನಾದರೂ ತನ್ನ ಹೃದಯನಿರ್ಮಲನಾಗಿ ಭಕುತಿಪೂರ್ವಕದಿಂದ ಸದಮಲಾ ತುಳಸಿಯನು ಸ್ತೋತ್ರಮಾಡಿದ ಕ್ಷಣಕೆ ಮದಗರ್ವ ಪರಿಹಾರವೋ || ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿ ನದಿಯ ತೀರದಲ್ಲೊಬ್ಬ ಭೂಸುರ ಪದಕೆ ಪೋದ ಪದೆಪದೆಗೆ ಸಿರಿ ವಿಜಯ ವಿಠ್ಠಲಗೆ ಪ್ರಿಯಳಾದ ಮದನತೇಜಳ ಭಜಿಸಿರಯ್ಯಾ ||೧೧|| ಶ್ರೀ ತುಳಸಿಯಾ ಸೇವಿಸಿ ||ಪ|| ||ಸಂಪೂರ್ಣಂ|| ಸೇವೆ ಮಾಡಿದರೆ ಆಧ್ಯಾತ್ಮಿಕವಾಗಿ ಒಳಿತು, ಸೂಕ್ತರೀತಿಯಲ್ಲಿ ಸೇವನೆ ಮಾಡಿದರೆ ಅರೋಗ್ಯಕ್ಕೂ ಒಳಿತು. ಅದನ್ನೇ ಅಲ್ಲವೇ ದಾಸರು ಹೇಳಿರುವುದು "ಶ್ರೀ ತುಳಸಿಯಾ ಸೇವಿಸಿ" ಎಂದು ?
ದಾಸ ಸಾಹಿತ್ಯ ಪ್ರಕಾರ
ಬರೆದವರು