ವಿದುರನ ಭಾಗ್ಯವಿದು

ವಿದುರನ ಭಾಗ್ಯವಿದು

( ರಾಗ ಕನ್ನಡಕಾಂಭೋಜ ಏಕತಾಳ) ವಿದುರನ ಭಾಗ್ಯವಿದು ಈ ಪದುಮಜಾಂಡ ತಲೆದೂಗುತಲಿದಕೋ ||ಪ|| ಕುರುರಾಯನ ಖಳಶ್ರೇಷ್ಠನ ರವಿಜನ ಗುರು ಗಾಂಗೇಯನ ಯದುವರನು ಜರೆದು ರಥವ ನಡೆಸುತ ಬೀದಿಯೊಳಗೆ ಬರುತಿರೆ ಜನರಿಗೆ ಸೋಜಿಗವೆನಿಸುತ || ಹೃದಯದೊಳಗೆ ನೆಲೆಗೊಂಡಿಹ ಹರಿಯನು ಎದುರಲಿ ಕಾಣುತ ವಿದುರನು ತಾ ಸದನವ ನೂಕುತಲಾಕ್ಷಣ ಬೀದಿಗೆ ಮುದದಿಂದಲಿ ಕುಣಿದಾಡುತ ಬಂದನು || ದೂರದಲಿಹ ಶ್ರೀಶನ ನೋಡುತ ಬಹು ಹಾರುತ ಚೀರುತ ಮೈಮರೆತು ವಾರಿಧಾರೆಯನು ನೇತ್ರದಿ ಸುರಿಸುತ ಬಾರಿ ಬಾರಿ ಬಲು ಹಿಗ್ಗುವ ಮನದಲಿ || ಅಡಿಗಡಿಗೆ ತನು ಕೆಡವುತಲೇಳುತ ದೃಢ ಭಕುತಿಯಲಿ ಗದ್ಗದ ಸ್ವರದಿಂ ನುಡಿಗಳು ತೊದಲುತ ರೋಮ ಪುಳಕಿತದಿ ದುಡುದುಡು ಓಡಾಡುವ ದಶದಿಶೆಯಲಿ || ಹಾಡುವ ಹಾರುವ ಚೀರುವುದೆಲ್ಲನು ನೋಡಿ ನಗುತಲಿರೆ ಮಾಧವನು ನೀಡುತ ಕರವ ಪಿಡಿದು ಬಿಗಿದಪ್ಪಿ ಕೊಂ- ಡಾಡುತ ಬಹಳ ಯಮಾಂಶನನು || ಒಲ್ಲನು ಕುಜನರ ಸೇವೆಯೆಂಬ ನುಡಿ ಸಲ್ಲಿಸುವುದಕಾ ಸಮಯದಲಿ ಮಲ್ಲ ವಿದುರನಾ ಕುತ್ಸಿತ ಕುಟೀರದಲ್ಲಿ ಬಂದು ಕುಳಿತನು ಇದೇ ಸಾಕ್ಷಿಯು || ಶ್ರೀನಿವಾಸ ಮಂದಿರದೊಳು ಬರ- ಲಾನಂದಾಬ್ಧಿಯೊಳಗೆ ಈಸುತಲಿ ಏನೆಂಬೆನು ಸುಕೃತವೇನೊದಗಿತೊ ತಾನೆ ಬಂದ ಬಹು ವಿಚಿತ್ರವೆನುತಲಿ || ಗಂಗೋದಕದಲಿ ಪದಯುಗ್ಮವ ತೊಳೆ- ದಂಗಕೆ ಪೂಸಿ ಸುಗಂಧವನು ಮಂಗಳಕರ ಪುಷ್ಪಂಗಳ ಸಮರ್ಪಿಸಿ ಕಂಗಳ ದಣಿದಣಿ ನೋಡುತ ಮೂರ್ತಿಯ || ವಾರಿಧಿ ಮನೆಯಾದಖಿಲೇಶಗೆ ಗೋ- ಕ್ಷೀರ ಸ್ವಲ್ಪ ಕೊಡಲಾದರದಿ ವಾರಿಜಾಕ್ಷ ಕರ ಸಂಪುಟದಿ ಕುಡಿದು ನೀರಂದದಿ ಹರಿಸಿದ ಬೀದಿಯೊಳಗೆ || ಒಂದು ಕುಡುತೆ ಪಾಲಿಗೆ ಹಳ್ಳಾಯಿತು ಮಂದರಧರನ ಮಹಾತ್ಮೆಯನು ಇಂದಿರೆಗಸದಳ ಚಿಂತಿಸಲೆಂದಿಗು ಮಂದನು ಬಲ್ಲನೆ ಎಂದು ಪೊಗಳುತಿಹ || ಸುರರಾಕಾಶದಿ ನೆರೆದು ನೋಡಿ ಬಲು- ಹರುಷದಿ ವಿದುರನ ಪೊಗಳುವರು ಸಿರಿದೇವಿಯರಸ ಪುರಂದರವಿಠಲನ ಶರಣರೆ ಧನ್ಯರು ಧನ್ಯರು ಧರೆಯೊಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು