ವಾಸಕೆ ಯೋಗ್ಯವಲ್ಲ ಗೋಕುಲವಿನ್ನು

ವಾಸಕೆ ಯೋಗ್ಯವಲ್ಲ ಗೋಕುಲವಿನ್ನು

( ರಾಗ ಸುರುಟಿ ಆದಿತಾಳ) ವಾಸಕೆ ಯೋಗ್ಯವಲ್ಲ ಗೋಕುಲವಿನ್ನು ಬೇಸರವಾಯಿತಲ್ಲ ||ಪ|| ದೋಷ ರಹಿತ ಸೋಳ ಸಾಸಿರ ಹೆಂಗಳ ಶೇಷಶಯನ ಕೃಷ್ಣ ಮೋಸ ಮಾಡಿದ ಮೇಲೆ ||ಅ|| ರಂಗ ಮಧುರೆಗೆಂದು ಅಕ್ರೂರನ ಸಂಗಡ ಪೋದನಂತೆ ಆಂಗಜನಯ್ಯನ ಸಂಗವಿಲ್ಲದ ಮೇಲೆ ಹೆಂಗಳ ಜನ್ಮವಿನ್ನೇತಕೆ ಸುಡಲಿ || ನಳಿನಾಕ್ಷ ಮಧುರೆಗೆಂದು ಪೋಗುವಂಥ ಸುಳಿವು ತಿಳಿಯಲಿಲ್ಲವು ಅಳಿ ಗಿಳಿ ಕೋಕಿಲೆಗಳ ರವವನು ಕೇಳಿ ಗಳಿಗೆ ಕಳೆವುದೊಂದು ಯುಗವಾದ ಬಳಿಕಿನ್ನು || ಪತಿ ಸುತರನ್ನು ಬಿಟ್ಟು ಶ್ರೀಪತಿ ನೀನೇ ಗತಿಯೆಂದು ನಂಬಿರಲು ಮತಿವಂತಕ್ರೂರನ ಜೊತೆಯೊಳು ಶ್ರೀಹರಿ ರಥವೇರಿ ತಾನು ಮಧುರೆಗೆ ಪೋದ ಮೇಲೆ || ಮಡದಿಯರಂತೆ ನಾವು ಒಡೆಯನೆಂದು ದೃಢದಿ ನಂಬಿದ್ದೆವಮ್ಮ ಕಡುಚೆಲ್ವ ಕೃಷ್ಣನು ನಡುನೀರಲಿ ಕೈಯ ಪಿಡಿಯದೆ ಬಿಟ್ಟು ತಾ ಕಡೆಗೆ ಸಾರಿದ ಮೇಲೆ || ಅಚ್ಯುತಾನಂತನು ನಮ್ಮವನೆಂದು ನೆಚ್ಚಿಕೊಂಡಿದ್ದೆವಮ್ಮ ಮೆಚ್ಚಿದ ಬಾಲೆಯರಿಗ್ಹುಚ್ಚು ಹಿಡಿಸಿ ಕ್ರೂರ ಹೆಚ್ಚಿದ ಮಾತನು ಕೊಚ್ಚಿ ಪೋದ ಮೇಲೆ || ಮುರಳಿ ನಾದವ ಕೇಳಿ ತರಳಾಕ್ಷಿಯರು ಮರುಳಾಗಿ ಬರುತಿದ್ದೆವೆ ದುರುಳ ಮನ್ಮಥನ ಪೂಸರಳಿಗೆ ಒಪ್ಪಿಸಿ ಇರುಳೇ ಮಧುರೆಗೆ ತೆರಳಿ ಪೋದ ಮೇಲೆ || ಸುರತಸುಖಗಳೆಂಬ ಶರಧಿಯೊಳು ಹರುಷಪಡುತಲಿದ್ದೆವೆ ನಿರುತ ಅವನ ಗುಣಚರಿತೆಯ ತೋರದೆ ತ್ವರಿತದಿ ನಮ್ಮನು ತೊರೆದು ಪೋದ ಮೇಲೆ || ಕಂತುಪಿತನ ಕಾಣದೆ ಈ ಪ್ರಾಣವು ಎಂತು ನಿಲ್ಲುವುದಮ್ಮ ಅಂತರಂಗದ ಕಾಮ ಶಾಂತಮಾಡದೆ ಪೋದ ಕಾಂತನ ಕಾಣದೆ ಭ್ರಾಂತರಾದ ಮೇಲೆ || ಇಂದಿರಾಪತಿ ನಮ್ಮ ಮಂದಿರದೊಳು ಬಂದು ಪೋಗುತಿರಲು ಸಂದೇಹದಿ ಇವನ ಹೊಂದಿದರಿವರೆಂದು ಮಂದಿಯೊಳಗೆ ಅಪನಿಂದೆ ಪೊತ್ತೆವಮ್ಮ || ಜಾರೆಯರಾದರೆಂದು ನಮ್ಮವರೆಲ್ಲ ಸಾರಿ ಕೈ ಬಿಟ್ಟರಮ್ಮ ವಾರಿಜಾಕ್ಷನು ಬರಿ ದೂರಿಗೆ ಗುರಿ ಮಾಡಿ ದಾರಿ ತೋರದೆ ಪೋದನಾರ ಸೇರುವೆವಮ್ಮ || ಬೆರೆವುದಿನ್ನೆಂತು ನಾವು ಶ್ರೀಹರಿಸಂಗ ದೊರೆವುದಿನ್ನೆಂದಿಗಮ್ಮ ಕರುಣಾಕರ ನಮ್ಮ ಪುರಂದರವಿಠಲನು ಕರೆದುಕೊಳ್ಳದೆ ನಮ್ಮ ತೊರೆದು ಪೋದ ಮೇಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು