ವಾರಿಜನಾಭನ ಕರುಣವೆ ಸ್ಥಿರ

ವಾರಿಜನಾಭನ ಕರುಣವೆ ಸ್ಥಿರ

( ರಾಗ ಬಿಲಹರಿ ಛಾಪುತಾಳ) ವಾರಿಜನಾಭನ ಕರುಣವೆ ಸ್ಥಿರ, ಸಂಸಾರ ಎರವು ಕೇಳಾತ್ಮ ||ಪ|| ಜಾರುತದಾಯುಷ್ಯ ದೂರದ ಮುಕುತಿಗೆ ದಾರಿ ಸಥಿಯು ಕೇಳಾತ್ಮ ||ಅ|| ಕೆರೆಯ ಕಟ್ಟಿಸು ಪೂದೋಟವ ಹಾಕಿಸು, ಸೆರೆಯ ಬಿಡಿಸು ಪುಣ್ಯಾತ್ಮ ಅರಿಯದೆ ಮನೆಗೆ ಬಂದವರಿಂಗಶನವಿತ್ತು, ಪರಮ ಪದವಿ ಪಡೆಯಾತ್ಮ || ಸತಿ ಸುತರೆಂಬ ಆಸೆಯ ಬಿಡು, ಅವರಿಂದ ಹಿತವಾಗದು, ಕಂಡ್ಯ ಆತ್ಮ ಮತಿಕೆಟ್ಟು ಕೆಡಬೇಡ ಮರಣ ತಪ್ಪದು, ಮುಂದೆ ಗತಿ ಯಾವುದು, ಕಂಡ್ಯ ಆತ್ಮ || ಆನೆ ಕುದುರೆ ಒಂಟೆ ಸೈನ್ಯ ಭಾಂಡಾರವ ಏನು ಪಡೆದರೇನು, ಆತ್ಮ ನಾನಾ ಬಗೆಯಿಂದ ಅಳಿದುಳಿದರೆ ಮುಂದೆ ಹಾನಿ ತಪ್ಪದು, ಕಂಡ್ಯ ಆತ್ಮ || ಎರವಿನ ಸಿರಿಗುಬ್ಬಿ ಮೈಮರೆವರೆ, ನೀರ ಕಡೆದರುಂಟೆ ಬೆಣ್ಣೆ, ಆತ್ಮ ಉರಗನ ಹೆಡೆಯ ನೆರಳ ಸೇರಿದ ಕಪ್ಪೆ ಸ್ಥಿರವೆಂದು ಬಗೆವರೆ, ಆತ್ಮ || ಲೆತ್ತ ಪಗಡೆ ಚತುರಂಗ ಜೂಜಾಡವ ಮತ್ತಾಡಿ ಕೆಡಬೇಡ, ಆತ್ಮ ಭಕ್ತಿಯಲಿ ಪುರಂದರವಿಠಲನ ನೆನೆಯಲು ಮುಕ್ತಿ ಪಡೆವೆ, ಕಂಡ್ಯ ಆತ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು