ಯಾತಕೆ ನೋಡುತಿ

ಯಾತಕೆ ನೋಡುತಿ

( ರಾಗ ಪೂರ್ವಿಕಲ್ಯಾಣಿ ಆದಿತಾಳ) ಯಾತಕೆ ನೋಡುತಿ ಯಮನ ಪಾಶಕೆ ಬೀಳುತಿ ನಾಥ ನಾರಾಯಣ ಹರಿ ಕೃಷ್ಣ ಎಂಬುವ ಕೀರ್ತನೆಯನು ದೂಷಿಸಿ ನಗುತಿ ||ಅ|| ಮೂಢತನದಿ ಮಲಮೂತ್ರದ ಭಾಂಡಕೆ ಬಹು ಶೃಂಗಾರವ ಮಾಡುತಿ ಗಾಢಾಂಧಕಾರದ ಮದ ಉನ್ಮತ್ತದಿ ಕವಿದು ಮುಗ್ಗುಂಡಿಗೆ ಬೀಳುತಿ ಪಾಡಿ ಪೊಗಳಿ ನಿನ್ನ ಬದಿಯಲ್ಲಿರುವರು ಕಾದುಕೊಂಡಿಹರೆಂದು ನೋಡುತಿ ಪೀಡಿಸಿ ಕಾಲನ ದೂತರು ಎಳೆವಾಗ ಬೇಡಿ ನೀ ಭಯದಲಿ ಕೂಗುತಿ || ಖಂಡ ಮಾಂಸಗಳು ತುಂಬಿದ ದೇಹವ ಕಂಡು ಸಂತೋಷದಿ ಉಬ್ಬುತಿ ಕಂಡ ಕಂಡದಾಪೇಕ್ಷಿಸಿ ಮನದಲಿ ಉಂಡೇನೆನ್ನುತ ಹಿಗ್ಗುತಿ ಕಂಡುಕೊಳ್ಳದೆ ಮುಂದಿನ ಮಾರ್ಗವ ಪುಂಡಾಟಗಳನು ಆಡುತಿ ಕಂಡ್ಯಮದೂತರು ಕೊಂಡೊಯ್ದು ನಿನ್ನನು ದಂಡಿಸುವಾಗ ಕಣ್ ಕಣ್ ಬಿಡುತಿ || ದುಷ್ಟ್ಯಮ ದೂತರು ಕಟ್ಟಿ ಎಳೆಯಲು ಬಿಟ್ಟು ಪೋಪುದೀ ಪ್ರಾಣವು ಕಟ್ಟಿದ ಮನೆಯನು ಬಿಟ್ಟು ಹೋಗುವಂತೆ ಬಿಟ್ಟು ಪೋಪುದೀ ಜೀವವು ಒಟ್ಟಿದ ಕಸವು ಸುಟ್ಟು ಹೋಗುವ ಹಾಗೆ ಸುಟ್ಟು ಪೋಪುದೀ ದೇಹವು ಹುಟ್ಟಿದ ಮಕ್ಕಳು ಕೊಟ್ಟಿಗೆ ಪಶುಗಳು ಪೆಟ್ಟಿಗೆ ನಗ ಬೆನ್ನಟ್ಟಿ ಬಾರವು || ಇರುಳು ಹಗಲು ನರಹರಿಯನು ತುತಿಸದೆ ನರ ಪಶುಗಳ ಕೊಂಡಾಡುತಿ ಸುರಧೇನುವು ತಾನಿರುತಿರೆ ನೆರೆಮನೆ ಹುಳಿಮಜ್ಜಿಗೆಯನು ಬೇಡುದಿ ಹರಿವ ಭಾಗೀರಥಿ ಎದುರೆಲ್ಲಿರೆ ನೀ ಒರತೆಯ ಜಲಪಾನ ಮಾಡುತಿ ಮುರಹರ ನಗಧರ ಮುಕುಂದ ಎನ್ನದೆ ನರಕ ಬಾಧೆಗೆ ಗುರಿಯಾಗುತಿ || ಸಿಟ್ಟಿಲಿ ನೀ ಹರಿದಾಸರ ಮುಖವನು ದೃಷ್ಟಿಸಿ ನೋಡದೆ ಹೋಗುತಿ ಮುಷ್ಟಿಯೊಳಗೆ ಒಂದಿಷ್ಟು ಕೊಡದೆ ನಿನ್ನ ಹೊಟ್ಟೆ ತುಂಬುವುದೆ ನೋಡುತಿ ಬಟ್ಟಬಯಲ ಸಂಸಾರದಲನುದಿನ ದಿಟ್ಟತನದಲೋಲಾಡುತಿ ನೆಟ್ಟನೆ ಪುರಂದರ ವಿಠಲನೆನದೆ ಮುಕ್ತಿ ಬಟ್ಟೆಯ ಕಾಣದೆ ಹೋಗುತಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು