ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ

ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ

'ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ'
ರಚನೆ: ಶ್ರೀ ವಾದಿರಾಜ ಸ್ವಾಮಿಗಳು


ಯಾಕೆ ಬಾಗಿಲ ಹಾಕಿರುವೆ ಕೋಕಿಲೇಶ್ವರಿ ವಾಣಿ   || ಪ ||
ಆರು ನಾನರಿಯೆ ನೀ ಸರಿರಾತ್ರಿಯಲಿ ಬಂದೀ   || ಅ ||

ನೀರೊಳು ಮುಳುಗಿ ನಿಗಮಚೋರನ ಕೊಂದ ನೀರಜಾಕ್ಷನೆ ಭಾಮೆ ನಾನು
ನಾರುವ ಮೈಯ್ಯ ಎನ್ನೊಳು ತೋರದೆ ಸಾರಿ ದೂರ ನೀ ಪೋಗೋ ರಂಗ   || 1 ||

ಮಂದರಗಿರಿಯನು ಬೆನ್ನೊಳಗಿಟ್ಟ೦ತ ಸುಂದರವದನನೇ ಭಾಮೆ ನಾನು
ಇಂದು ನಿನಗೆ ತಕ್ಕ ಭಾರಂಗಳಿಲ್ಲವಯ್ಯ ಸಿಂಧುವಿನೊಳಗೆ ಪೋಗೋ ರಂಗ   || 2 ||

ಧರಣಿಗೆ ಸುಖವನು ನೀಡಿದ ಸೂಕರ ಪರಮಪುರುಷನೇ ಭಾಮೆ ನಾನು
ವರಾಹರೂಪವು ನಿನ್ನ ಘುರುಘುರು ಶಬ್ದವು ಅರಿವೆ ನೀನಿಲ್ಲಿಂದ ಪೋಗೋ ರಂಗ   || 3 ||

ಬಾಲನ ತಾಪವ ಲೀಲೆಯಿಂದರಿತನ ನಾರಸಿಂಹನೆ ಭಾಮೆ ನಾನು
ಮೇಲಿದ್ದ ವಸನವು ಕ್ರೂರ ಕಾರ್ಯಾಂಗಳಲ್ಲ ಕಂಡ೦ಜುವವಳಲ್ಲ ಪೋಗೋ ರಂಗ   || 4 ||

ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾನು
ಕೂಸಿನ ರೂಪದಿ ಮೋಸ ಮಾಡಿದವಗೆ ದಾಸಿ ಇನ್ನೊಬ್ಬಳು ಏಕೋ ರಂಗ   || 5 ||

ತಾತನ ಮಾತಿಗೆ ಮಾತೆಯ ತರಿದಂತ ಖ್ಯಾತಭಾರ್ಗವನು ನಾನೇ
ಮಾತೆಯ ತರಿದ ಪಾತಕಿ ನಿನಗಿನ್ನು ದೂತಿ ಇನ್ನೊಬ್ಬಳು ಏಕೋ ರಂಗ   || 6 ||

ದಶರಥನಂದನ ದಶಮುಖ ಭಂಜನ ಪಶುಪತಿವಂದ್ಯನೆ ಭಾಮೆ ನಾನು
ಹಸನಾದ ಏಕಪತ್ನಿವ್ರತದೊಳಿರುವ ನಿನಗೆ ಹೊಸಕನ್ನಿಕೆಯರು ಏಕೋ ರಂಗ   || 7 ||

ಹದಿನಾರು ಸಾಸಿರ ನೂರೆಂಟು ಸುದತಿಯರ ಬದಿಯಲ್ಲಿದ್ದವನೆ ಭಾಮೆ ನಾನು
ಕದನಕ್ಕೆ ಬೇರಿನ್ನು ಮಾರ್ಗಂಗಳಿಲ್ಲವಯ್ಯ ವದನ ಮುಚ್ಚಿಕೊಂಡು ಪೋಗೋ ರಂಗ   || 8 ||

ಬೌದ್ಧರ ಕುಲದಲ್ಲಿ ಹುಟ್ಟಿ ದಾನವರ ಮುಗ್ಧರ ಮಾಡಿದೆ ಭಾಮೆ ನಾನು
ಬುದ್ಧ ವಚನಂಗಳು ಎನ್ನಲಿ ಪೇಳಲು ವೃದ್ಧನಾರಿ ನಾನಲ್ಲ ಪೋಗೋ ರಂಗ   || 9 ||

ವರತುರಗವನೇರಿ ಧರೆಯನು ಚರಿಸಿದ ದೊರೆವೀರ ನೋಡೆ ಭಾಮೆ ನಾನು
ಕುದುರೆಯ ಚಾಕರಿಯೊಳಿರುವವಗೆ ಇನ್ನು ಯುವತಿಯ ಸುಖವಿನ್ನೆಂತೋ ರಂಗ   || 10 ||

ಸರ್ವಪ್ರಾಣಿಗಳನ್ನು ಉದರದಲ್ಲಿಟ್ಟುಕೊಂಡು ಶರಧಿಯೊಳ್ ಮಲಗಿದೆ ಭಾಮೆ ನಾನು
ದೊರೆ ಹಯವದನನ ಚರಣಕೆ ಎರಗುತ ತೆಗೆದಳು ಬಾಗಿಲ ಭಾಮೆ ಆಗ ತೆಗೆದಳು ಬಾಗಿಲ ಭಾಮೆ || 11 ||
______________________________________________________________________

ವಾಸವ = ಇಂದ್ರ; ವಾಸವನನುಜ = ಇಂದ್ರನ ತಮ್ಮ = ಉಪೇಂದ್ರ ಅಂದರೆ ವಿಷ್ಣು
ಸುದತಿ = ಸುಂದರಿ
ತುರಗ = ಕುದುರೆ (ವಾಜಿ, ತೇಜಿ - ಇವು ಕೂಡ ಕುದುರೆ ಎಂಬ ಅರ್ಥ ಹೊಂದಿವೆ)

ದಾಸ ಸಾಹಿತ್ಯ ಪ್ರಕಾರ