ಭ್ರಷ್ಟರಾದರು ಮನುಜರು

ಭ್ರಷ್ಟರಾದರು ಮನುಜರು

( ರಾಗ ಕಾಂಭೋಜ ಝಂಪೆ ತಾಳ) ಭ್ರಷ್ಟರಾದರು ಮನುಜರು ||ಪ|| ಅಷ್ಟಮದ ಗರ್ವದಲಿ ಹರಿಸ್ಮರಣೆಯನು ಮರೆತು ||ಅ|| ಮಡದಿಮಾತನು ಕೇಳಿ ನಡೆದುಕೊಂಬನು ಭ್ರಷ್ಟ ಪಡೆದ ಜನನಿಯನು ಬೈಯುವನು ಭ್ರಷ್ಟ ಕಡನ ಕೊಟ್ಟವರೊಡನೆ ಧಡಿಗತನ ಮಾಡುವ ಭ್ರಷ್ಟ ಬಡವರಿಗೆ ಕೊಟ್ಟ ನುಡಿ ನಡೆಸದವ ಭ್ರಷ್ಟ || ಬಾರದೊಡವೆಗಳನ್ನು ಬಯಸುವನು ತಾ ಭ್ರಷ್ಟ ಸೇರದವರೊಡನೆ ಸ್ನೇಹಿಸುವ ಭ್ರಷ್ಟ ಶೌರಿದಿನ ವ್ರತವನಾಚರಿಸದವನತಿ ಭ್ರಷ್ಟ ನಾರಿಯರ ನೆಚ್ಚಿದಾ ನರನು ಕಡುಭ್ರಷ್ಟ|| ತಂತ್ರವನು ಅರಿಯದೆ ಮಂತ್ರ ಮಾಡುವ ಭ್ರಷ್ಟ ಮಂತ್ರವಿಲ್ಲದ ವಿಪ್ರನತಿ ಭ್ರಷ್ಟನು ಅಂತರವನರಿಯದೆ ನುಡಿಯುವನು ಭ್ರಷ್ಟ ಸ್ವ- ತಂತ್ರವಿಲ್ಲದೆ ಕಾರ್ಯ ನಡೆಸುವನು ಭ್ರಷ್ಟ|| ಹರಿ ಚರಿತ್ರೆಗಳನ್ನು ಜರೆದಾಡುವ ಭ್ರಷ್ಟ ಹರಿಯ ಶರಣರ ನೋಡಿ ನಿಂದಿಸುವ ಭ್ರಷ್ಟ ಗುರು ಹರಿಯರ ಪಾದಕ್ಕೆರಗದವನವ ಭ್ರಷ್ಟ ನೆರೆಹೊರೆಯರನು ನೋಡಿ ಕರುಬುವನು ಭ್ರಷ್ಟ|| ಹರಿನಾಮವನುದಿನದಿ ಸ್ಮರಿಸದಾತನು ಭ್ರಷ್ಟ ಕರುಣವಿಲ್ಲದ ವಿಪ್ರನವ ಭ್ರಷ್ಟನು ಕರುಣಾಳು ನಮ್ಮ ಸಿರಿಪುರಂದರವಿಠಲನ್ನ ಚರಣಕಮಲವ ಸ್ಮರಿದವ ಭ್ರಷ್ಟನಯ್ಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು