ಬರಿದೆ ದೂರುವಿರಿಯೇಕಮ್ಮ

ಬರಿದೆ ದೂರುವಿರಿಯೇಕಮ್ಮ

( ರಾಗ ಮಧ್ಯಮಾವತಿ. ಆಟ ತಾಳ) ಬರಿದೆ ದೂರುವಿರಿಯೇಕಮ್ಮ ,ನಮ್ಮ ಬಾಲನ ಬರಿದೆ ದೂರುವಿರಿಯೇಕಮ್ಮ ||ಪ|| ತರಳನಿವನು ಬಲು ದುರುಳನೆಂದೆನುತಲಿ ತರತರದಲಿ ನಾರಿಯರು ನೀವು ಪ್ರತಿ ದಿನ ||ಅ|| ಹಾಲ ಕುಡಿಯಲರಿಯ ಎನ್ನಯ ಕಂದ ಪಾಲು ಬೆಣ್ಣೆ ಕದಿವನೆ ಆಲಯದೊಳಗಿಂದಗಲದ ಹಸುಮಗ ಬಾಲೆರ ಸೊಗಸಿಗೆ ಒಲಿದು ಬರುವನೆಂತು || ಮಾತನರಿಯದ ಬಾಲ ನಿಮ್ಮನು ಕಂಡು ಸೋತು ಮೋಹಿಸಬಲ್ಲನೆ ಪಾತಕತನದಲ್ಲಿ ನುಡಿದರೆ ತೊಟ್ಟಿಲೊ- ಳೀ ತೆರದಿ ಮಲಗಿರುವ ಎನ್ನಯ ಶಿಶು || ನಡೆಯಲರಿಯದ ಬಾಲ ನಿಮ್ಮನೆಯಲಿ ತುಡುಗು ಕಳವು ಮಾಳ್ಪನೆ ಕೊಡಲು ಮೊಲೆಯನುಣಲರಿಯದ ಕಂದಯ್ಯ ಹುಡುಗೇರ ಕುಚಗಳ ಪಿಡಿವನೆಂತು ಛೀ ಛೀ || ಸುತ್ತಿ ಕಟ್ಟಿದ ಹಗ್ಗವ ಸೆಳೆದು ಬಂದು ಮತ್ತಿಮರ ಕೆಡಹೋದೆ ಒತ್ತಿ ಕಾಳಿಂಗನ ಹೊಡೆಗಳ ತುಳಿದು ಸಾ- ಮರ್ಥ್ಯದಲಸುರರ ಸಂಹರಿಸಬಲ್ಲನೆ ಕಂದ || ಇಂತು ನಂದನ ಕಂದನ ಮಾಯಾಗಾರ- ನೆಂದು ಪೇಳದಿರೆ ಇನ್ನು ಎಂದೆಂದು ನಂಬದ ಚಾಡಿಯ ಪೇಳದೆ ಬಂದು ಲಾಲಿಸಿರೆ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು