ಬಗೆಬಗೆ ಆಟಗಳೆಲ್ಲಿ

ಬಗೆಬಗೆ ಆಟಗಳೆಲ್ಲಿ

(ರಾಗ ಕೇದಾರಗೌಳ. ಆದಿ ತಾಳ) ಬಗೆಬಗೆ ಆಟಗಳೆಲ್ಲಿ ಕಲಿತೆಯ್ಯ ಜಗವ ಮೋಹಿಪನೆ ||ಪ|| ಖಗವರಗಮನ ಅಗಣಿತಮಹಿಮ ಜಗದವರೊಳು ನೀ ಮಿಗಿಲಾಗೀ ಪರಿ ||ಅ.ಪ|| ಒಬ್ಬಳ ಬಸಿರಿಂದಲಿ ಬಂದು ಮ- ತ್ತೊಬ್ಬಳ ಕೈಯಿಂದಲಿ ಬೆಳೆದು ಕೊಬ್ಬಿದ ಭೂಭಾರವನಿಳುಹಲು ಇಂಥ ತಬ್ಬುಬ್ಬಿದಾಟಗಳೆಲ್ಲಿ ಕಲಿತೆಯ್ಯ ಮಗುವಾಗಿ ನೀ ಪೂತನಿಯ ಮೊಲೆಯುಂಡು ನಗುತ ಅವಳ ಅಸುವನೆ ಕೊಂಡ್ಯೋ ಅಘಹರ ನೀ ಗೋಪಿಯೊಳು ಜನಿಸಿ ಇಂಥ ಸೊಗಸಾದ ಲೀಲೆಗಳೆಲ್ಲಿ ಕಲಿತೆಯ್ಯ ಲೋಕರಂತೆ ನೀ ಮೃತ್ತಿಕೆ ಮೆದ್ದು ತಾ ಕೋಪಿಸೆ ಜನನಿಯು ಬೇಗ ಓಕರಿಸೆನ್ನಲು ಬಾಯೊಳು ಬ್ರಹ್ಮಾಂಡ ಲೋಕವ ತೋರಿದ್ದು ಎಲ್ಲಿ ಕಲಿತೆಯ್ಯ ಮಡುವ ಧುಮುಕಿ ಕಾಳಿಂಗನ ಪಿಡಿದು ಹೆಡೆಯ ಮೇಲೆ ಕುಣಿದಾಡುತಿರೆ ಮಡದಿಯರು ನಿನ್ನ ಬಿಡದೆ ಬೇಡಲು ಕಡು ದಯದೋರಿದ್ದು ಎಲ್ಲಿ ಕಲಿತೆಯ್ಯ ಒಂದು ಪಾದ ಭೂಮಿಯೊಳು ವ್ಯಾಪಿಸಿ ಮ- ತ್ತೊಂದು ಪಾದ ಗಗನಕಿಡಲು ನಂದದಿ ಬಲಿಯ ಶಿರದಿ ಮೂರನೇದಿಟ್ಟು ಬಂಧಿಸಿದಾಟಗಳೆಲ್ಲಿ ಕಲಿತೆಯ್ಯ ತ್ವರೆಯಿಂದ ಭಸ್ಮಾಸುರ ವರ ಪಡೆದು ಹರನ ಶಿರದಿ ಕರವಿಡಲು ತರುಣಿ ರೂಪವ ತಾಳಿ ಅವನ ಹಸ್ತದ್ಯವನ ಮರುಳು ಗೊಳಿಸಿ ಕೊಂದದ್ದೆಲ್ಲಿ ಕಲಿತೆಯ್ಯ ಜಗಕೆ ಮೂಲನೆಂದು ನಾಗರಾಜ ಕರೆಯೆ ಖಗವಾಹನನಾಗಿ ನೀ ಬಂದು ವಿಗಡ ನಕ್ರನ ಚಕ್ರದಿ ಸವರಿದೆ ಹಗರಣದಾಟವನೆಲ್ಲಿ ಕಲಿತೆಯ್ಯ ವೇದಗಳರಸಿ ಕಾಣದ ದೇವನೆ ಸಾದರದಲಿ ವಿದುರನ ಗೃಹದಿ ಮೋದದಿ ಒಕ್ಕುಡುತೆಯ ಪಾಲನೆ ಕೊಂಡು ಹಾದಿಲಿ ಹರಿಸಿದ್ದು ಎಲ್ಲಿ ಕಲಿತೆಯ್ಯ ಡಂಭಕ ಹಿರಣ್ಯಕ ಕುಮಾರ ಪ್ರಹ್ಲಾದನ್ನ ಹಂಬಲವಿಲ್ಲದೆ ಬಾಧಿಸ ಬರಲು ಸ್ತಂಭದಿ ಹರಿರೂಪದೋರಿ ಭಕ್ತನ ಇಂಬಿಟ್ಟು ಪೊರೆದದ್ದು ಎಲ್ಲಿ ಕಲಿತೆಯ್ಯ ಚಕ್ರಧರನೆ ಜರೆತನಯನೊಳು ಕಾದಿ ಸಿಕ್ಕದೆ ಓಡಿದನೆಂದೆನಿಸಿ ಭಕ್ತ ಭೀಮನಿಂದ ಸೀಳಿಸಿದೆಯೊ ಇಂಥ ಠಕ್ಕು ಆಟಗಳ ಎಲ್ಲಿ ಕಲಿತೆಯ್ಯ ಪ್ರಾಣ ಕೊಳುವೆ ಈ ದಿನವೆಂದರ್ಜುನ ಧೇನಿಸದಲೆ ಸೈಂಧವಗೆನಲು ಕಾಣದಂತೆ ಚಕ್ರವ ಸೂರ್ಯಗೆ ಇಟ್ಟಾ ಬಾಣ ಹೊಡೆಸಿದನು ಎಲ್ಲಿ ಕಲಿತೆಯ್ಯ ಆ ಶಿರ ಆತನ ಪಿತನ ಕರದೊಳು ಸೂಸುತ ರಕ್ತವ ಬೀಳುತಿರೆ ಸೋಸಿ ನೋಡದೆ ರುಂಡ ಬಿಸುಡಲವನ ಶಿರ ಸಾಸಿರ ಮಾಡಿದಾಟವೆಲ್ಲಿ ಕಲಿತೆಯ್ಯ ಸರ್ಪನ ಬಾಣ ಉರಿಯುತ ಬರಲು ಕಂ- ದರ್ಪನ ಪಿತ ನೀ ರಣದಲ್ಲಿ ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ ನೀ ತೋರ್ಪಡಿಸಿದ ಆಟ ಎಲ್ಲಿ ಕಲಿತೆಯ್ಯ ದುರುಳ ದುಶ್ಯಾಸನ ಸಭೆಯೊಳು ದ್ರೌಪದಿ ಸೀರೆಯ ಕರದಿಂ ಸೆಳೆಯುತಿರೆ ಹರಿ ಶ್ರೀ ಕೃಷ್ಣನೆ ಪೊರೆಯೆನಲಾ ಕ್ಷಣ ಅರಿವೆ ರೂಪದಿ ಬಂದದ್ದೆಲ್ಲಿ ಕಲಿತೆಯ್ಯ ಕುರುಪತಿ ಸಭೆಯಲಿ ಗರುವದಿ ಕುಳಿತಿರೆ ಸಿರಿ ಕೃಷ್ಣನ ನೀ ಬರೆ ವಂದಿಸದೆ ಧರೆಯನು ಮೆಟ್ಟುತ ಚರಣಕೆ ಉರುಳಿಸಿ ಪರಿಹಾಸ್ಯ ಮಾಡಿದುದೆಲ್ಲಿ ಕಲಿತೆಯ್ಯ ದುರಿಯೋಧನ ತನ್ನ ಪಕ್ಷ ಸ್ವೀಕರಿಸೆ ಮೊರೆ ನಿನಗಿಡಲು ಮರುಳುಗೊಳಿಸಿ ಧುರದೊಳು ಪಾರ್ಥನ ಸಾರಥಿಯಾಗಿ ನೀ ಕುರುಕುಲವಳಿದದ್ದನ್ನೆಲ್ಲಿ ಕಲಿತೆಯ್ಯ ಪತಿ ಶಾಪದಿಂದಲಿ ಶಿಲೆಯಾದಹಲ್ಯೆಯ ಹಿತದಿಂದವಳನುದ್ಧಾರ ಮಾಡಿ ಪತಿಗೂಡಿಸಿ ಮಹಾಪತಿ ವ್ರತೆಯೆನಿಸಿದ ಮಿತ ಮಹಿಮೆಯ ಆಟವೆಲ್ಲಿ ಕಲಿತೆಯ್ಯ ಎಂದಿನಂತೆ ಅಂಬರೀಷ ದ್ವಾದಶಿ ವ್ರತ ಒಂದೇ ಭಕುತಿಲಿ ಸಾಧಿಸಲು ಬಂದು ದುರ್ವಾಸರು ಶಾಪವನೀಯಲು ಅಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯ್ಯ ಕುಲಶೀಲವನಿದಜಮಿಳನು ಸರಸದಿ ಹೊಲತಿಯ ಕೂಡಿ ಮರಣ ವೇಳೆ ಬಲು ಮೋಹದಿ ಸುತ ನಾರಗನೆಂದೊದರಲು ಒಲಿದು ಸುಗತಿಯಿತ್ತದ್ದೆಲ್ಲಿ ಕಲಿತೆಯ್ಯ ಬಡತನ ಪಾರ್ವನ ಬಿಡದೆ ಬಾಧಿಸಲು ಮಡದಿಯ ನುಡಿ ಕೇಳಿ ಆ ಕ್ಷಣದಿ ಒಡೆಯ ನೀನವನೊಪ್ಪಿಡಿ ಅವಲಕ್ಕಿ ಕೊಂಡು ಕಡು ಭಾಗ್ಯ ಕೊಟ್ಟದ್ದೆಲ್ಲಿ ಕಲಿತೆಯ್ಯ ಪಾಂಡುಸುತರು ಕೌರವ ಮಧ್ಯದೊಳು ಸಂಧಿಯ ಮಾಡಲು ನೀ ಪೋಗಿ ನಿಂದ್ಯ ಕೌರವಗೆ ದುಷ್ಪ್ರೇರಿಸಿ ನೀ ಬಂದ ಕಾರ್ಯ ಮಾಡಿದ್ದೆಲ್ಲಿ ಕಲಿತೆಯ್ಯ ಆ ಸಮಯದಿ ಕಲಿವಂಶದಿ ಕೌರವ ಹೇಸದೆ ನಿನ್ನನು ಕಟ್ಟಿಸಲು ಸಾಸಿರನಾಮನೆ ವಿಶ್ವ ರೂಪವ ತೋರಿ ಮೋಸ ಗೊಳಿಸಿದಾಟವೆಲ್ಲಿ ಕಲಿತೆಯ್ಯ ಎಂದಿಗೂ ನಿನ್ನ ಗುಣವೃಂದಗಳೆಣಿಸಲು ಇಂದಿರೆ ಬ್ರಹ್ಮನಿಗಸದಳವು ಮಂದರಧರ ಸಿರಿ ಪುರಂದರ ವಿಠಲನೆ ಚಂದ ಚಂದದಾಟಗಳನೆಲ್ಲಿ ಕಲಿತೆಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು