ನಿನ್ನ ದಾಸರ ದಾಸನೆಂತಾಹೆನೋ

ನಿನ್ನ ದಾಸರ ದಾಸನೆಂತಾಹೆನೋ

--------ರಾಗ -ಕಾಂಬೋಧಿ (ಮಾಲಕಂಸ್) ಝಂಪೆತಾಳ ನಿನ್ನ ದಾಸರ ದಾಸನೆಂತಾಹೆನೋ ||ಪ|| ಅನಂತ ಅಪರಾಧವನುಗಾಲ ಮಾಡುತಿಹೆ ||ಅ.ಪ|| ಸ್ನಾನ ಸಂಧ್ಯಾನ ಜಪ ಮೌನವೇ ಮೊದಲಾದ ನಾನಾ ವಿಧದ ವಿಹಿತ ಧರ್ಮ ತೊರೆದು ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ ಹೀನ ಜನರೊಡನಾಡಿ ಜ್ಞಾನಿ ಜನಗಳ ನಿಂದಿಸಿದೆ ||೧|| ಏಕಾದಶಿಯ ಜರೆದು ಲೋಕವಾರ್ತೆಗಳಿಂದ ಶ್ರೀಕಾಂತ ನಿನ್ನ ಸೇವೆಯನು ಮರೆದು ಬೇಕಾದ ವೈಷಿಕವ ಸ್ವೀಕರಿಸಿ ಲೋಕದೊಳು ಸಾಕಿದವರನು ನಾ ನಿರಾಕರಿಸಿ ಬಾಳುವೆನು ||೨|| ಎನಗಧಿಕರಾದವರೊಡನೆ ದ್ವೇಷವನು ಅನುಗಾಲ ಮಾಡುವೆನು ಅನಿಮಿಷೇಶ ಎನಗೆ ಸರಿಯಾದವರ ಕಂಡು ಮತ್ಸರಿಸುವೆನು ಎನಗಿಂತ ನೀಚರನು ನೋಡಿ ನಾ ನಗುತಿಪ್ಪೆ ||೩|| ಕಾಸಿನಾಸೆಗೆ ಪೋಗಿ ದಾಸವೇಷವ ಧರಿಸಿ ಮೋಸ ಮಾಡುವೆ ಜನರ ಪಾಶ ಬೀರಿ ವಾಸುದೇವನೆ ಸರ್ವದೇಶಕಲಾದಿಗಳಿ- ಗೀಶನೆಂದರಿಯದಲೆ ಮೋಸ ಹೋದೆನು ಸ್ವಾಮಿ ||೪|| ಸಕಲದುರ್ಗುಣಗಳಾಗಾರ ನಾನವನಿಯೊಳು ಭಕುತಿ ವೈರಾಗ್ಯ ಪ್ರಸಕುತಿಯಿಲ್ಲ ಭಕುತ ವತ್ಸಲ ಜಗನ್ನಾಥವಿಠಲನೆ ಅಕಳಂಕ ಮಹಿಮ ಮುಕುತಾಮುಕುತರಿಗೆ ಒಡೆಯ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು