ಗರುಡ ಗಮನ ಬಂದನೋ

ಗರುಡ ಗಮನ ಬಂದನೋ

( ರಾಗ ಬಿಲಹರಿ. ಅಟ ತಾಳ) ಗರುಡ ಗಮನ ಬಂದನೋ, ನೋಡಿರೋ ಬೇಗ ||ಪ || ಗರುಡ ಗಮನ ಬಂದ ಧರಣಿಯಿಂದೊಪ್ಪುತ ಕರೆದು ಬಾರೆನ್ನುತ ವರಗಳ ಬೀರುತ ||ಅ || ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ ಚಿನ್ನವ ಪೋಲುವ ವಿಹಂಗಜ ರಥದಲಿ ಘನ್ನಮಹಿಮ ಬಂದ ಭಿನ್ನ ಮೂರುತಿ ಬಂದ ಸಣ್ಣ ಕೃಷ್ಣ ಬಂದ ಬೆಣ್ಣೆ ಕಳ್ಳ ಬಂದ || ಪಕ್ಷಿ ವಾಹನ ಬಂದ ಲಕ್ಷ್ಮೀಪತಿಯು ಬಂದ ಕುಕ್ಷಿಯೊಳಗೆ ಜಗವನ್ನಿಟ್ಟವ ತಾ ಬಂದ ಸೂಕ್ಷ್ಮ ಸ್ಥೂಲದೊಳು ಇಪ್ಪನು ತಾ ಬಂದ ಸಾಕ್ಷಿ ಭೂತನು ಅವ ಸರ್ವೇಶ್ವರನು ಬಂದ || ತಂದೆ ಪುರಂದರವಿಠಲರಾಯ ಬಂದ ಬಂದು ನಿಂದು ನಲಿದಾಡಿದನು ಸಿಂಧುಶಯನ ಬಂದ ಅಂದು ಸಾಂದೀಪನ ನಂದನ ತಂದಿತ್ತಾನಂದಮೂರುತಿ ಬಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು