ಗಜುಗನಾಡುತಲಿರ್ದನು

ಗಜುಗನಾಡುತಲಿರ್ದನು

( ರಾಗ ಕೇದಾರಗೌಳ. ಛಾಪು ತಾಳ) ಗಜುಗನಾಡುತಲಿರ್ದನು ನಮ್ಮ ರಂಗ ||ಪ|| ವ್ರಜದ ಮಕ್ಕಳ ಕೂಡ ಹರುಷದಿಂದಲಿ ಬಲು ||ಅ || ಒಂದನ್ನೆ ಹಾರಿಸಿದ ವೇಗದಿ ಮ- ತ್ತೊಂದರಿಂದಲಿ ತಾ ಬಡೆದ ಒಂದೆ ಬಾರಿಗೆ ಎಲ್ಲ ಗಜುಗವ ಗೆಲಿದನು || ಬಚ್ಚಿಟ್ಟ ಗಜ್ಜುಗವ ಹುಡುಕೆಂದು ಅಚ್ಯುತ ನಗುತ ನಿಂತ ಮುಚ್ಚಿಟ್ಟ ಗಜುಗವು ದೊರಕಲಿಲ್ಲವೊ ಒಂದು || ಕಾಕಾಚಿ ಕೊಂಡ್ಹೋಯಿತು ಎನುತಲಿ ರಂಗ ಆಕಾಶವನು ತೋರಿದ ಬೇಕಾದ ಗಜುಗವ ನಿಮಗೆ ತರುವೆ ಎಂದ || ಗಜುಗ ಗಿಡಗಳನೇಕ ತೋರಿದವಯ್ಯ ಗಜುಗ ಗೊಂಚಲುಗಳನೇಕ ಗಜುಗದ ಗಂಟುಗಳ ಕಟ್ಟಿದರು ಮಕ್ಕಳು || ಪರಿ ಪರಿ ಗಜುಗದಾಟ ಮಕ್ಕಳ ಸಂಗಡ ಗೆರೆಯ ದಾಟುವ ಆಟವು ನೆರೆಹೊರೆ ಮಕ್ಕಳ ಕೂಡ ಸಂಭ್ರಮ ಮಾತು || ಬೊಮ್ಮನ ಪಡೆದಂಥ ಚಿಕ್ಕ ಕೂಸು ಅಮ್ಮನ ತೊಡೆಯ ಮೇಲೆ ಗಮ್ಮನೆ ಮಲಗಿದ ಆಟಂಗಳನೆ ಬಿಟ್ಟು || ಸುರರು ವಂದಿಸಿ ನಿಲ್ಲಲು ಯಕ್ಷ ಕಿನ್ನರರು ಸ್ವರವೆತ್ತಿ ಸ್ತುತಿಗೈಯಲು ದೊರೆ ತಂದೆ ಪುರಂದರವಿಠಲನು ಒಪ್ಪಿದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು