ಗಂಡ ಬಂದ ಹೇಗೆ ಮಾಡಲೇ

ಗಂಡ ಬಂದ ಹೇಗೆ ಮಾಡಲೇ

( ರಾಗ ನಾದನಾಮಕ್ರಿಯ. ಛಾಪು ತಾಳ) ಗಂಡ ಬಂದ ಹೇಗೆ ಮಾಡಲೇ, ಅಯ್ಯಯ್ಯೋ ಪಾಪಿ ||ಪ || ಪಂಚಮಹಾ ಪಾತಕಿ ಗಂಡ, ಹೊಂಚಿಕ್ಕಿ ನೋಡಿಕೊಂಡು ವಂಚನೆಯಿಂದಲಿ ಗುಡುಗು-ಮಿಂಚಿನಂತೆ ಬಂದು ನಿಂತ ಮಂಚದ ಕೆಳಗಾರು ಹೊಕ್ಕೊಳ್ಳೊ, ನಿಧಿ ಹಿಡಿಸುವಂಥ ಸಂಚಿಯೊಳಗಾದರು ಕೂಡೆಲೊ, ಧಾನ್ಯದ ದೊಡ್ಡ ಹಂಚಿನ್ಹರವಿಯಲ್ಲಿ ಅಡಗೆಲೊ || ನಾಳೆ ಬಾ ಎಂದ್ಹೇಳಿ ನಾನು, ಕಾಲನೆಲ್ಲ ಕಟ್ಟಿಕೊಂಡೆ ಬಾಳುವರ ಮಕ್ಕಳಿಗೆ , ಜಾಳಿಗೀ ಹಾಕುವರಾ ಬುದ್ಧಿ ಕೇಳಿ ಎನ್ನ ಮಾತು ಮೀರಿದ್ಯ, ಎನಗೆ ಇಂಥ ಧಾಳಿ ತಂದು ತೋರಿದ್ಯ , ನಮ್ಮಿಬ್ಬರನ್ನು ಗಾಳಿಗಿಟ್ಟು ಸದರ ಮಾಡಿದ್ಯ || ಮುಟ್ಟಬೇಡೆಂದು ನಾನು, ಮೊಟ್ಟಮೊದಲೇ ಹೇಳಿ ಇದ್ದೆ ಕೆಟ್ಟ ವೇಳೆಯಲ್ಲಿ ಬಂದು, ಕಟ್ಟಿನಲ್ಲಿ ಸಿಲುಕಿದೆಯೊ ಅಟ್ಟದ ಮೇಲಾದರು ಕೂತುಕೊಳ್ಳೊ, ನಿನ್ನ ಹಿಡಿಸುವಂಥ ಪೆಟ್ಟಿಗೆಯೊಳಗಾದರು ಹೊಕ್ಕೊಳ್ಳೊ, ಕೈಯಲ್ಲಿ ಕೊಳ್ಳಿ- ಕಟ್ಟಿಗೆಯಾದರು ಹಿಡಕೊಳ್ಳೊ || ಸೀರೆಯನ್ನು ಉಟ್ಟುಕೊಂಡು, ನಾರಿಯಂತೆ ರೂಪ ತೋರಿ ಮೋರೆ ಮುಸುಕು ಮಾಡಿಕೊಂಡ, ಗಾಳಿ ಸೇರ್ದನಾಗಿ ಪೋದ ಈ ರೀತಿಗಿನ್ನ್ಹೇಗೆ ಮಾಡಲೊ, ಮುಂಜಾನೆಯೆದ್ದು ಮೋರೆಯನ್ನು ಹೇಗೇ ತೋರಲೊ, ಸರಿ ನಾರಿಯರ ಕೂಡಿ ನೀರಿಗೆ ಇನ್ಹೇಗೆ ಹೋಗಲೊ || ಹಾದರ ಎಂಬೋದು ಹರಿಗುಂಟೆ ಕಾಣೆ ಬ್ರಾಹ್ಮರಿಗೆ ಹೋದ ಬುದ್ಧಿಗಾಗಿ ಇನ್ನು, ಖೇದಬಟ್ಟರೇನೊ ಮುಂದೆ ಹಾದಿ ತೋರೋ ಪುರಂದರವಿಠಲ, ನಿನ್ನ ನಂ- ಬಿದೆನು ಈಗ ನಾನು ಹಡೆದ ಮಕ್ಕಳನೆಲ್ಲ ಸಾಧಿಸಿ ನಿನ್ನೀ ಪಾದಕೆ ಅರ್ಪಿಸಿಹನೊ ರಂಗಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು