ಒಂದೆ ಮನದಿ ನಾನಿಂದು ನಮಿಸುವೆ

ಒಂದೆ ಮನದಿ ನಾನಿಂದು ನಮಿಸುವೆ

( ರಾಗ ಯದುಕುಲಕಾಂಭೋಜ. ಛಾಪು ತಾಳ) ಒಂದೆ ಮನದಿ ನಾನಿಂದು ನಮಿಸುವೆ ಸಿಂಧುಶಯನನೆ ಮಂದಹಾಸನೆ ||ಪ|| ಬಂದ ದುರಿತಗಳೊಂದು ಕೂಡದೆ ತಂದೆ ಸಲಹಬೇಕೋ ||ಅ|| ನಿನ್ನ ಹೊರತು ನಾನನ್ಯರೊಬ್ಬರ ಇನ್ನು ಕಾಣೆನೊ ಎನ್ನ ಸಾಕುವ ಚೆನ್ನಾಗಿ ಪ್ರಸನ್ನನಾಗೆಲೊ ಘನ್ನ ಮಹಿಮ ನೀನು || ಕೋರಿ ನಿನ್ನನು ಬಾರಿಬಾರಿಗೆ ಸಾರಿದೆ ನಾ ವಾರಿಜಾಕ್ಷನೆ ತೋರು ನಿನ್ನಯ ಚಾರುಚರಣವ ಅ- ಪಾರ ಕರುಣಾನಿಧೇ || ತುಂಗ ನಿನ್ನ ಪಾದಾಬ್ಜಭೃಂಗ ನಾ ಮಂಗಳಾಂಗನೆ ಭಂಗ ಮಾಡದೆ ರಂಗ ನಿನ್ನಂತರಂಗಭಕ್ತರ ಸಂಗ ನೀಡ ಬೇಕೊ || ಕಾಮಜನಕ ಸುಧಾಮ ಮಿತ್ರನೆ ದಾಮವುದರನೆ ನೇಮದಿಂದಲಿ ರಾಮ ನಿನ್ನಯ ನಾಮಭಜನೆಗಳ ಪ್ರೇಮ ಮಾಡಬೇಕೊ || ದೇವದೇವನೆ ಸಾರ್ವಭೌಮನೆ ಯಾವ ಕಾಲದಿ ಯಾವ ದೇಶದಿ ಜೀವರೆಲ್ಲರ ಕಾವ ದೇವನೆ ಗೋವಿಂದ ಗೋಪತಿಯೆ || ಈಶ ಎನಗೆಂಬೆ ಜಗದೀಶ ನಿನ್ನನು ಶ್ರೀಶ ಮನ್ನಿಸೊ ಶೇಷಶಯನನೆ ದಾಸ ಎನ್ನನು ಘಾಸಿ ಮಾಡದೆ ಪೋಷಿಸ ಬೇಕೋನೀನು || ಪರಾಕು ಎಂಬೆ ನಾ ಪರಾಕು ಮಾಡದೆ ಹರಾದಿವಂದ್ಯನೆ ಸುರರಪಕ್ಷನೆ ಚರಾಚರದಲಿ ವಿರಾಜಿತ ತಂದೆ ಪುರಂದರವಿಠಲರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು