ಏನು ಮಾಡುವುದಿಲ್ಲವಮ್ಮ

ಏನು ಮಾಡುವುದಿಲ್ಲವಮ್ಮ

( ರಾಗ ರೇಗುಪ್ತಿ. ಝಂಪೆ ತಾಳ) ಏನು ಮಾಡುವುದಿಲ್ಲವಮ್ಮ ನಾನಂತು ನೋಡುವುದಿಲ್ಲವಮ್ಮ ||ಪ|| ನಾನು ಗೋಪರಿಗಾಗಿ ಮನೆಮನೆ ಸುಳಿದರೆ ಮಾನಿನೀರೆಲ್ಲರು ದೂರುಮಾಡುತೈದಾರೆ ||ಅ|| ಕಣ್ಣುಮುಚ್ಚಾಟಕೆ ನಾನು ಅವರ ಬಣ್ಣದ ಸೀರೆಯಲ್ಲಡಗಿದೆನು ಸಣ್ಣವಣಾಟಕ್ಕೆ ನವನೀತ ಮೆದ್ದರೆ ಬೆಣ್ಣೆಕಳ್ಳನೆಂದು ಬಾಯಿ ಮಾಡುತೈದಾರೆ || ವಿಷದ ಚಳಿಗಂಜಿ ಯಶೋದೆ, ನಾ ಬೆದರಿ ಸೆರಗನೆ ಪಿಡಿದೆ ಕುಸುರದ ಚೆಂಡೆಂತ ಕುಚಗಳ ಪಿಡಿದರೆ ಶಶಿಮುಖೇರೆಲ್ಲರು ಸಾರಿ ದೂರುತೈದಾರೆ || ಗಿಳಿಬಿದ್ದು ಕಂಡು ಬೆದರಿ, ಅವರ ತೋಳುಗಳ ನಾ ಪಿಡಿದೆ ಆಲದ ಹಣ್ಣೆಂದು ತುಟಿಗಳ ಸವಿದರೆ ಬಾಲೆಯರೆಲ್ಲ ಬಾಯಿಮಾಡುತೈದಾರೆ || ಹಾವಿನ ಹೆಡೆಗಂಜಿ ಬೆದರಿ, ಅವರ ನಿರಿಗಳ ನಾ ಪಿಡಿದೆ ಮಾವಿನ ಹಣ್ಣೆಂದು ಗಲ್ಲವ ಕಡಿದರೆ ಭಾವೆಯರೆಲ್ಲರು ಬಹಳ ದೂರುತೈದಾರೆ || ಗೆಳೆಯರ ಕಂಡು ನಾ ಬಂದೆ, ನಾ ಸುಳಿದೆ ಅವರ ಮನೆಯ ಮುಂದೆ ಇಳೆಯೊಳು ಪುರಂದರವಿಠಲರಾಯನ ಒಳಗೆ ಬಾಯೆಂದು ವನಿತೆ ಕೂತಿದ್ದಾರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು