ಏನು ಅನುಮಾನ ಮಾಡುತೀ

ಏನು ಅನುಮಾನ ಮಾಡುತೀ

( ರಾಗ ಮಾಂಜಿಶಭೈರವಿ. ಆದಿ ತಾಳ)

 

ಏನು ಅನುಮಾನ ಮಾಡುತೀ , ವ್ಯರ್ಥ ಮಾಡುತಿ

ಶ್ರೀನಿವಾಸನ ನಾಮವೇ ಗತಿಯೋ ||ಪ||

 

ನೀರ ಮೇಲಿನ ಗುಳ್ಳೆಗೆ ಸರಿ ಈ ಶ-

ರೀರ ಸ್ಥಿರವೆಂದು ನಂಬದಿರೋ

ನಾರೀಮಣಿಯರ ನೋಡಿ ಮೋಹಿಸುವುದು

ನಿರಯವೋ ನಿತ್ಯನಿಧಾನ ತಿಳಿಯೋದು ||

 

ಆಗಭೋಗ ದೇಹತ್ಯಾಗಕಾಲದಲ್ಲಿ

ಸಾಗಿಬಾರರೊಂದು ತಿಳಿದುನೋಡೋ

ಭೋಗಿಶಯನನ ನಿತ್ಯನೇಮದಕಿಂತ

ಭಾಗ್ಯವ ಕಾಣೆ ಕಲಿಯುಗದಲ್ಲಿ ||

 

ಸತಿ ಸುತರಲ್ಲಿ ನೀ ಮಾಡುವ ಪ್ರೀತಿ ಶ್ರೀ-

ಪತಿಯಲಿ ಮಾಡೋ ನಿಮಿಷ ಮಾತ್ರ

ಸತತ ಸಚ್ಚಿದಾನಂದಮೂರುತಿಯ

ಸ್ತುತಿಸಿದವರ ಕಾಯುವೆನೆಂಬೋ ಪ್ರಖ್ಯಾತ||

 

ಮೂಢ ಮನುಜರ ಸೇವೆ ಬಿಡೊ

ಹರಿಯ ಸೇವೆ ನೀ ಬಿಡದಿರೊ

ದೃಢವಾಗಿ ನಮ್ಮ ಮಧ್ವಪತಿ

ಪುರಂದರವಿಠಲನಲ್ಲಿ ಮನಸು ಇಡೋ ||

ದಾಸ ಸಾಹಿತ್ಯ ಪ್ರಕಾರ
ಬರೆದವರು