ಉತ್ತಮರ ಸಂಗ ಎನಗಿತ್ತು ಸಲಹೊ

ಉತ್ತಮರ ಸಂಗ ಎನಗಿತ್ತು ಸಲಹೊ

( ಕಾಂಭೋಧಿರಾಗ ಝಂಪೆತಾಳ) ಉತ್ತಮರ ಸಂಗ ಎನಗಿತ್ತು ಸಲಹೊ ||ಪ|| ಚಿತ್ತಜಜನಕ ಸರ್ವೋತ್ತಮ ಮುಕುಂದ ||ಅ.ಪ|| ತಿರುಗಿತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆ ಪರಿಪರಿಯ ಪಾಪಗಳ ಮಾಡಲಾರೆ ಮರಣಜನನಗಳೆರಡು ಪರಿಹರವ ಮಾಡಯ್ಯ ಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ||೧|| ಏನ ಪೇಳಲಿ ದೇವ ನಾ ಮಾಡಿದ ಕರ್ಮ ನಾನಾ ವಿಚಿತ್ರವೈ ಶ್ರೀನಿವಾಸ ಹೀನಜನರೊಳಗಾಟ ಶ್ವಾನಾದಿಗಳ ಕೂಟ ಜ್ಞಾನವಂತನ ಮಾಡೊ ಜಾನಕೀರಮಣ ||೨|| ನಿನ್ನ ನಂಬಿದ ಮ್ಯಾಲೆ ಭಯವ್ಯಾತಕೆ ಪನ್ನಗಾಧಿಪಶಯನ ಮನ್ನಿಸಯ್ಯ ಮುನ್ನ ಭಕುತರನೆಲ್ಲ ಚೆನ್ನಾಗಿ ಪಾಲಿಸಿದ ಎನ್ನೊಡೆಯ ರಂಗವಿಠಲ ಎನ್ನ ದೊರೆಯೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು