ಈ ಜೀವವಿದ್ದು ಫಲವೇನು

ಈ ಜೀವವಿದ್ದು ಫಲವೇನು

(ಉದಯರಾಗ ಝಂಪೆತಾಳ ) ಈ ಜೀವವಿದ್ದು ಫಲವೇನು ಚೆಲುವ ರಾಜೀವಲೋಚನನ ನೆನೆಯದ ಪಾಪಿತನುವಿನಲಿ ||ಪ|| ಅರುಣವುದಯದಲೆದ್ದು ಹರಿಯ ಸ್ಮರಣೆಯ ಮಾಡಿ ಗುರುಹಿರಿಯರ ಮನದಲ್ಲಿ ನೆನೆದು ನೆನೆದು ಪರಮಸುಖಿಯಾಗಿ ನದಿಯೊಳು ಮಿಂದು ರವಿ- ಗರ್ಘ್ಯವನೆರೆಯದ ಪಾಪಿತನುವಿನಲಿ || ಹೊನ್ನಕಲಶದಲಿ ಅರ್ಘ್ಯೋದಕವ ಶ್ರೀಹರಿಗೆ ಚೆನ್ನಾಗಿ ಅಭಿಷೇಕವನು ಮಾಡಿ ರನ್ನದುಡಿಗಳ ಉಡಿಸಿ ರತ್ನಗಳ ಅಳವಡಿಸಿ ಕಣ್ಣಿನಲಿ ನೋಡಲರಿಯದ ಕಪಟತನುವಿನಲಿ || ತುಲಸಿದಳಗಳ ಪುಷ್ಪಮಾಲಿಕೆಯ ನವರತ್ನ ಹೊಳೆವ ಕೌಸ್ತುಭ ಕೊರಳಲ್ಲಿ ಪದಕ ನಳಿನಾಕ್ಷಗಿಟ್ಟು ಕರ್ಪೂರದಾರತಿಯೆತ್ತಿ ಕಣ್ಣಿನಲಿ ನೋಡಲರಿಯದ ಕಪಟತನುವಿನಲಿ || ಪರಿಪರಿಯ ಭಕ್ಷ್ಯಪಾಯಸ ಪಾಕಶಲ್ಯಾನ್ನ ವರರಸ ಘೃತ ಗುಡಕ್ಷೀರ ದಧಿಯ ಪರಮಪುರುಷಗೆ ತಂದು ನೈವೇದ್ಯವನೆ ಮಾಡಿ ಹರುಷದಿಂದಲಿ ಕೈಮುಗಿಯಲರಿಯದ ಕಪಟತನುವಿನಲಿ || ನಿತ್ಯನೈಮಿತ್ತಕರ್ಮಗಳನು ಮಾಡಿ ಬಹು ಅರ್ತಿಯಿಂದಲಿ ಅತಿಥಿಗಳನೆಲ್ಲ ಕರೆಸಿ ವಿತ್ತವಿದ್ದಾಗಲೇ ಹರಿಯ ಪೂಜೆಯ ಮಾಡಿ ಸ- ರ್ವೋತ್ತಮನ ಪ್ರೀತಿಪಡಿಸದ ವ್ಯರ್ಥತನುವಿನಲಿ || ಪ್ರತಿದಿನವು ಹರಿನಾಮ ಸಕಲವೇದಪುರಾಣ ಕಥೆಗಳನು ಕೇಳಿ ಮನದಣಿದು ದಣಿದು ಅತಿಶಯದ ಮಧ್ವಮತವನನುಸರಿಸದೆ ಪರ- ಗತಿಗೆ ಸಾಧನವ ಸಾಧಿಸಲರಿಯದಿಹ ಮೂಢ ಈ ತನುವಿನಲಿ || ಉರಗಾದ್ರಿಯಲಿ ಚಂದ್ರಪುಷ್ಕರಿಣಿ ಮೊದಲಾದ ಪರಿಪರಿತೀರ್ಥದಲಿ ಮುಣುಗಿ ಮುಣುಗಿ ತಿರುವೇಂಗಳಪ್ಪ ಶ್ರೀ ಪುರಂದರವಿಟ್ಠಲನ ಚರಣಸೇವೆಯ ಮಾಡಲರಿಯದ ಕಪಟತನುವಿನಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು