ಇಕ್ಕೊ ನವನೀತ ಚೋರ ಸಿಕ್ಕಿದನಮ್ಮ

ಇಕ್ಕೊ ನವನೀತ ಚೋರ ಸಿಕ್ಕಿದನಮ್ಮ

(ರಾಗ ನವರೋಜು ಏಕತಾಳ) ಇಕ್ಕೊ ನವನೀತ ಚೋರ ಸಿಕ್ಕಿದನಮ್ಮ , ಹೆ- ಮ್ಮಕ್ಕಳೆಲ್ಲರು ಕೂಡಿ ನಮ್ಮಕ್ಕರ ತೀರಿಸಿಕೊಂಬ ||ಪ|| ಅಂದು ಮೊದಲಾಗಿ ನಮ್ಮ ಮಂದಿರದೊಳು ಪೊಕ್ಕು ತಿಂದ ಮೀಸಲ ಬೆಣ್ಣೆ ದಂಧೆ ಮಾಡಿ ಪೋದನಕ್ಕ , ಬಹು ದಂಧೆ ಮಾಡಿ ಪೋದನಕ್ಕ || ಗಾಢದಿಂದಲಿವನ ಹೆಡೆಮುಡಿಯ ಬಿಗಿದು ಕಟ್ಟಿ ಒಡಿಹೋದರೆ ಸಿಕ್ಕ , ಕಿಡಿ- ಗೇಡಿ ರಂಗನ ಬಿಡಬೇಡಿ , ಕಿಡಿ ಗೇಡಿ ರಂಗನ ಬಿಡಬೇಡಿ || ಯಾರು ಇಲ್ಲದ ವೇಳೆ ದಾರಿ ನೋಡುತ್ತಲಿವ ಸೂರೆ ಮಾಡುವ ಹಾಲು ಮೊಸರು ಚೋರ ರಂಗನ ಬಿಡಬೇಡಿರೆ ಧೀರ ಕೃಷ್ಣನ ಬಿಡಬೇಡಿರೆ || ಗಂಡನಿಲ್ಲದ ವೇಳೆ ನೋಡಿ ಭಂಡು ಮಾಡಿ ಸೀರೆ ಕದ್ದು- ಕೊಂಡು ಹಾಲು ಕೆನೆಯ ಕದ್ದ ಲಂಡ ರಂಗನ ಬಿಡಬೇಡಿರೆ ಪುಂಡ ಕೃಷ್ಣನ ಬಿಡಬೇಡಿರೆ || ಕಾದುಕೊಂಡಿವ ಬಾಹೊ ಹಾದಿಯ ನೋಡಿ ನಾ ದಣಿದೆ ಆದುದೆಮ್ಮಯ ಕಾಮ ಸಾಧಿಸಿಕೊಂಬ ಕ್ರೋಧ ಸಾಧಿಸಿಕೊಂಬ || ಒರಳಿಲಿ ಕಟ್ಟಿಸಿಕೊಂಡು ಒರಳ ಕೊಂಡೋಡುವನಿಂಥ ದುರುಳ ಕೃಷ್ಣನ ಬಿಡಬೇಡಿ ಮರುಳ ಮಾಡಿ ಹೋದನಮ್ಮ ಬಹು ಮೋಸ ಮಾಡಿ ಹೋದನಮ್ಮ || ಇಂದಿನ ದಿನ ಸುದಿನ ಮಂದರಧರ ದೊರೆತ ಕಾರಣ ತಂದೆ ಪುರಂದರ ವಿಠಲನ್ನ ಅಪ್ಪಿಕೊಂಬ ಸಂತೋಷದಿಂದ ಅಪ್ಪಿಕೊಂಬ ||
ದಾಸ ಸಾಹಿತ್ಯ ಪ್ರಕಾರ
ಬರೆದವರು