ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ

ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ

(ರಾಗ ಕಾಂಭೋಜ ಝಂಪೆತಾಳ) ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ ಇಂದ್ರಾದಿ ಲೋಕವೆಲ್ಲವು ಕಾಲ ಕಂಡ್ಯ ಎಂದಿನಂತಲ್ಲ ಈ ದೇಹ ಕಳೆ ಕಂಡ್ಯ ಹಿಂದು ಮುಂದಣ ಗತಿಯ ಅರಿತಿಹುದು ಕಂಡ್ಯ || ಎಳೆತುಳಸಿ ವನಮಾಲೆ ಧರಿಸಿಕೊಳಬೇಕು ಘಳಿಲನೇ ಹರಿಯ ಪೂಜಿಸುತಿರಲುಬೇಕು ಕಳಕಳನೆ ಏಕಮನ ಕರಗುತಿರಬೇಕು ನಳಿನನಾಭನ ಪಾದ ಪೊಗಳುತಿರಬೇಕು || ಹರಿಕೃಷ್ಣ ಶರಣೆನ್ನು ಅದು ನಿಮಗೆ ಲೇಸು ಹರಿಕಥಾಮೃತವನ್ನೆ ಜಗದೊಳಗೆ ಸೂಸು ಹರಿಭಕ್ತಿಯಿಲ್ಲದವರ ಸಂಗಕ್ಕೆ ಹೇಸು ಹರಿಯ ಮರೆತರೆ ಮುಂದೆ ನರಕದೊಳಗ್ಹಾಸು || ದುರ್ಜನರ ಮನೆಯೊಳಿಹ ಹಾಲ ಸವಿಗಿಂತ ಸಜ್ಜನರ ಮನೆಯೊಳಿಹ ನೀರು ಲೇಸೆಂದ ದುರ್ಜನರ ಸಂಗದೆಡೆ ಕೂಡಿಯಾಟದಕಿಂತ ಸಜ್ಜನರ ಕೂಡೆ ಕಾದಾಡುವುದೇ ಲೇಸೆಂದ || ಹರಿಯನೇ ಅನವರತ ನೆನೆಯುತಿರಬೇಕು ಕರಗಳಲಿ ಹರಿಯ ಪೂಜಿಸುತಿರಲುಬೇಕು ಚರಣಂಗಳಲಿ ಪುಣ್ಯಸ್ಥಳವ ಮೆಟ್ಟಲು ಬೇಕು ಪುರಂದರವಿಠಲನ್ನ ನೆನೆಯುತಿರಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು