ಆ ವೆಂಕಟಗಿರಿನಿಲಯನಂಘ್ರಿ

ಆ ವೆಂಕಟಗಿರಿನಿಲಯನಂಘ್ರಿ

--ರಾಗ ಶಂಕರಾಭರಣ (ಭೈರವಿ) ಆದಿತಾಳ(ಧುಮಾಳಿ) ಆ ವೆಂಕಟಗಿರಿನಿಲಯನಂಘ್ರಿ ರಾ- ಜೀವಯುಗ್ಮಗಳಿಗೆ ನಮಿಸುವೆನು ||ಪ|| ಸೇವಿಪ ಜನರಿಗಮರತರುವೆನಿಸಿ ಧ- ರಾವಲಯಾಖ್ಯ ದಿವಿಯೊಳೆಸೆವ ||ಅ.ಪ|| ಆವನಂಘ್ರಿಜಲ ಸಕಲ ಜಗತ್ತಿಗೆ ಪಾವನಕರವೆಂದೆನಿಸುವದು ಶ್ರೀವಿಧಿಭವ ಶಕ್ರಾದ್ಯರು ಅವನ ಸೇವಕಸೇವಕರೆನಿಸುವರು ||೧|| ದೇವೋತ್ತಮ ತಾನಾಗಿ ನಿಖಿಲ ಜಡ ಜೀವ ಭಿನ್ನ ಕರ್ಮವ ಮಾಳ್ಪ ಸ್ಥಾವರ ಜಂಗಮರೊಳಗೆ ನೆಲೆಸಿ ವೇ- ದಾವಳಿಯಿಂದ ಸ್ತುತಿಸಿಕೊಂಬ ||೨|| ಮಾತರಿಶ್ವನೊಡನಹಿಪನೊರೆದ ಸ- ತ್ವಾತಿಶಯವ ತೋರೆನುತಾಗ ಜಾತರೂಪ ಶೈಲಾತ್ಮಜನೊಪ್ಪಿರೆ ವೀತಿಹೋತ್ರ ಸಖ ಕಿತ್ತೊಗೆಯ ||೩|| ಪೀತಕರ್ಣನಳವಳಿದು ಸ್ತುತಿಸೆ ನಿ- ಕೇತನತ್ರಯವ ನಿಳಿದು ಬೇಗ ಧಾತ ಮಹಿಳೆ ತೀರ್ಥದಿ ಲಕುಮಿಸ- ಮೇತನಾಗಿ ಮೋದಿಸುತಿಪ್ಪ ||೪|| ಭೂಸುರನೋರ್ವನು ತೊಂಡಮಾನ ಧರ- ಣೀಶನ ನಿಲಯದಿರಿಸಿ ಸತಿಯ ಕಾಶಿಗೆ ಪೋಗಲು ನೃಪತಿ ಮರೆಯೆ ನಿ- ಶ್ವಾಸವನೈದಿದಳಾ ಸತಿಯು ||೫|| ಆ ಸಮಯದಿ ದ್ವಿಜವರ್ಯನು ಬೆಸಗೊಳೆ ಕ್ಲೇಶದಿ ಭೂಮಿಪ ಸಂಸ್ತುತಿಸೆ ಕೇಶವ ತಾನಸ್ಥಿಗಳ ತರಿಸಿ ಸು- ವಾಸಿನಿ ಶಿಶುಸಹ ಒಲಿದಿತ್ತ ||೬|| ವೃದ್ಧ ಭೂಸುರನ ಒಯ್ದು ಸಲಿಲದೊಳ- ಗದ್ದಿ ಕುಮಾರತ್ವವನಿತ್ತ ಅಧ್ವರವೆಸಗುವ ಋಷಿಗಳ ವೇದಾ- ಪದ್ಧವ ತಿದ್ದಿ ಮಖವ ಕಾಯ್ದ ||೭|| ಮಧ್ಯರಾತ್ರಿಯೊಳ್ಬೆಸಗೊಂಡ ನೃಪತಿಗೆ ಸಿದ್ಧಿಸಿದರಿಶಂಖದ್ವಯವ ಮೃದ್ಭಾಂಡವ ವಿರಚಿಸಿದವಗೊಲಿದು ಚೋದ್ಯವ ನೃಪತಿಗೆ ತೋರಿಸಿದ ||೮|| ಮನವಾಕ್ಕಾಯದಿ ಕರ್ಮಜನ್ಯಫಲ ದಿನದಿನಗಳಲಿ ಸಮರ್ಪಿಸುತ ಮನುಜೋತ್ತಮರಾಧಿವ್ಯಾಧಿಗಳ ದು- ರ್ಜನುಮಗಳೆಲ್ಲವ ಪರಿಹರಿಪ ||೯|| ಕುನರಗಲಭ್ಯನು ಕುವಲಯದೊಳು ಕಾ- ರುಣಿಕ ಧರ್ಮಾಕರ್ಮಾರ್ಥಗಳ ಜನರಿಗೆ ಸಲಿಸುವ ಜಗನ್ನಾಥವಿಠಲ ಮನೆ ಮಾಡಿದ ಶೇಷಾಚಲವ ||೧೦||
ದಾಸ ಸಾಹಿತ್ಯ ಪ್ರಕಾರ
ಬರೆದವರು