ಅಹುದೋ ಹನುಮಂತ ನೀನಹುದೊ ಬಲವಂತ

ಅಹುದೋ ಹನುಮಂತ ನೀನಹುದೊ ಬಲವಂತ

ಅಹುದೋ ಹನುಮಂತ ನೀನಹುದೊ ಬಲವಂತ ನೀನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ||ಪ|| ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆ ಅಹುದೊ ಮಧ್ವಮತಕೆ ಬಿರುದು ನೀ ಅಹುದೊ ||ಅ.ಪ|| ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನು ಸಂಜೀವನವ ತಂದ್ಯೊ ಸಕಲ ಕಪಿಗಳಿಗೆ ಮಂಜುಭಾಷಣ ನೀನು ಶರಧಿಯನು ದಾಟಿದೆಯೊ ಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ ||೧|| ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನು ಪಂಥವನಾಡಿ ದಾಯಾದಿಯರೊಡನೆ ಕಂತುಪಿತನ ಕೂಡಿ ಕೌರವರನ ಗೆಲಿದ್ಯೊ ಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ ||೨|| ಮಧ್ವಾವತಾರದಲಿ ಮುನಿವೇಷವನು ತಾಳಿ ಅದ್ವೈತವೆಂಬೊ ಅರಣ್ಯವನು ತರಿದೆ ಮಧ್ವಶಾಸ್ತ್ರವೆಂಬೊ ಮತವ ನಿರ್ಣೈಸಿದೆ ಮುದ್ದು ಹಯವದನದಾಸ ನೀನಹುದೊ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು