ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ

( ರಾಗ ಮುಖಾರಿ ಝಂಪೆ ತಾಳ) ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ||ಪ|| ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿ ಸವಿಯೂಟಗಳನುಂಡು ಭ್ರಮಿಸ ಬೇಡ ಅವನ ಕೊಂದಿವನ ಕೊಂದರ್ಥವನು ಗಳಿಸುವರೆ ಜವನ ದೂತರು ಬರುವ ಹೊತ್ತ ನೀನರಿಯೆ || ಮೊನ್ನೆ ಮದುವೆಯಾದೆನೈ ಕರೆವುದೊಂದೆರಡೆಮ್ಮೆ ನಿನ್ನೆ ಕೊಂಡೆನು ಕ್ಷೇತ್ರ ಫಲವು ಬಹುದು ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲು ಬೆನ್ನ ಬಿಡುವಳೆ ಮೃತ್ಯು ವ್ಯರ್ಥ ಜೀವಾತ್ಮ || ಹೊಸ ಮನೆಯ ಕಟ್ಟಿದೆನು ಗೃಹ ಶಾಂತಿ ಮನೆಯೊಳಗೆ ಬಸಿರಿ ಹೆಂಡತಿ ಮಗನ ಮದುವೆ ನಾಳೆ ಹಸನಾಗಿ ಇದೆ ಬದುಕು ಸಾಯಲಾರೆನು ಎನಲು ಕುಸುರಿದರಿಯದೆ ಬಿಡರು ಯಮನವರು ಆಗ || ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬ ಮತ್ತೊಬ್ಬ ಮಗನ ಉಪನಯನ ನಾಳೆ ಅರ್ತಿಯಾಗಿದೆ ಬದುಕು ಸಾಯಲಾರೆನು ಎನಲು ಮೃತ್ಯು ಹೆಡತಲೆಯಲ್ಲಿ ನಗುತಿರ್ಪುದರಿಯೆ || ಅಟ್ಟಡಿಗೆಯುಣಲಿಲ್ಲ ಇಷ್ಟ ದರುಶನವಿಲ್ಲ ಕೊಟ್ಟ ಸಾಲವ ಕೇಳ್ವ ಹೊತ್ತನರಿಯೆ ಕಟ್ಲೆ ತುಂಬಿದ ಮೇಲೆ ಕ್ಷಣಮಾತ್ರ ಇರಲಿಲ್ಲ ಅಷ್ಟರೊಳು ಪುರಂದರ ವಿಠಲನೆನು ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು