ತಲ್ಲಣಸಿದಿರು ಕಂಡ್ಯ ತಾಳು ಮನವೆ

ತಲ್ಲಣಸಿದಿರು ಕಂಡ್ಯ ತಾಳು ಮನವೆ

ರಚನೆ : ಕನಕದಾಸರು ರಾಗ : ಕೇದಾರಗೌಳ ತಾಳ: ಝಂಪೆ ತಲ್ಲಣಸಿದಿರು ಕಂಡ್ಯ ತಾಳು ಮನವೆ || ಪಲ್ಲವಿ || ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ಅನು || ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು ಗಟ್ಯಾಗಿ ರಕ್ಷಿಪನು ಇದಕೆ ಸಂಶಯವಿಲ್ಲ || ೧ || ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ ಅಡಿಗಡಿಗೆ ಆಹಾರವಿತ್ತವರು ಯಾರೋ ಹಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ || ೨ || ಕಲ್ಲಿನಲಿ ಹುಟ್ಟಿ ತಾ ಕೂಗುವ ಕಪ್ಪೆಗೆ ಅಲ್ಲಿ ಆಹಾರವನು ತಂದೀಯುವರ್ಯಾರೋ ಬಲ್ಲಿದನು ಕಾಗಿನೆಲೆಯಾದಿಕೇಶವರಾಯ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ೩ ||