Skip to main content

ಈಸಬೇಕು ಇದ್ದು ಜೈಸಬೇಕು

ಈಸಬೇಕು-ಇದ್ದು ಜೈಸಬೇಕು|
ಹೇಸಿಕೆ ಸಂಸಾರದಲ್ಲಿ ಲೇಶ ಆಸೆ ಇಡದ ಹಾಗೆ ||ಪ||

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ||೧||

ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ|
ಮೀರಿ ಆಶೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ ||೨||

ಮಾಂಸದಾಶೆಗೆ ಮತ್ಸ್ಯವು ಸಿಲುಕಿ ಹಿಂಸೆಪಟ್ಟ ಪರಿಯೊಳು |
ಮೋಸ ಹೋಗದೆ ಪುರಂದರವಿಠಲ ಜಗದೀಶನೆನುತ ಕೊಂಡಾಡುವರೆಲ್ಲ ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Comments

ಸಾಂಸಾರಿಕ ಜೀವನದ ಬಗ್ಗೆ ವೈರಾಗ್ಯ ತಾಳಿದ ಕೆಲವರು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸದೆ ಸಂಸಾರದಿಂದ ಓಡಿ ಹೋಗುವರು . ಆಧ್ಯಾತ್ಮ ವೈರಾಗ್ಯ ಇತ್ಯಾದಿ ವಿಷಯಗಳಲ್ಲಿ ಇರುವರು. ಹಾಗೆ ಮಾಡಬಾರದೆಂದು ದಾಸರು ಇಲ್ಲಿ ಹೇಳಿದ್ದಾರೆ .

( ಈ ಸಂಸಾರವೆಂಬ ಸಾಗರದಲ್ಲಿ ) ಈಜಬೇಕು , ಇದ್ದು ಗೆಲ್ಲಬೇಕು
ಅಸಹ್ಯವನ್ನುಂಟುಮಾಡುವ ಸಂಸಾರದಲ್ಲಿ ಸ್ವಲ್ಪವೂ ಆಸೆಯನ್ನು ಇಟ್ಟುಕೊಬಾರದು

ಕಮಲದ ಎಲೆಯ ಮೇಲಿರುವ ನೀರು ಆ ಎಲೆಗೆ ಅಂಟಿಕೊಳ್ಳದ ಹಾಗೆ
ಲೌಕಿಕ ಜೀವನದಲ್ಲಿ ಆಸಕ್ತಿ ಇಟ್ಟುಕೊಂಡು ದೇವರ ಹೆಸರನ್ನು ತೆಗೆದುಕೊಳ್ಳುತ್ತ ಬದುಕಬೇಕು

ಗೇರು(ಗೋಡಂಬಿ) ಹಣ್ಣಿನಲ್ಲಿ ಬೀಜ ಹೊರಗೇ ಇರುತ್ತದೆ . ಆ ತರಹ ಇದ್ದು ಒಂದು ಮಿತಿಯನ್ನು ಮೀರಿ ಹೆಚ್ಚು ಆಸೆ ಮಾಡದೆಯೇ ಕೃಷ್ಣನನ್ನು ನೆನೆಯಬೇಕು.

ಗಾಳದ ತುದಿಗೆ ಕಟ್ಟಿದ ಮಾಂಸದ ತುಂಡು / ಹುಳದ ಆಶೆಗೆ ಸಿಕ್ಕಿ ಮೀನು ಕಷ್ಟ ಪಡುವ ಹಾಗೆ ಆಗಬಾರದು. ಹಾಗೆ ಮೋಸ ಹೋಗದೆ ದೇವರನ್ನ ನೆನೆದು ಕೊಂಡಾಡಬೇಕು.